ಲಾಸ್ ಏಂಜಲಿಸ್, ಮಾ 11 (DajiworldNews/AA): ’ಓಪನ್ ಹೈಮರ್’ ಸಿನಿಮಾವು 2024ರ ಆಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದು, ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಾಲಿವುಡ್ ನಟ ಸಿಲಿಯನ್ ಮರ್ಫಿ ಅವರಿಗೆ ಒಲಿದು ಬಂದಿದೆ.
ಭಾನುವಾರ ಅಮೇರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ ನಲ್ಲಿ ನಡೆದ 96ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ’ಓಪನ್ ಹೈಮರ್’ ಸಿನಿಮಾವು ಆಸ್ಕರ್ನ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಒರಿಜನ್ ಬ್ಯಾಗ್ರೌಂಡ್ ಸ್ಕೋರ್, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಚಲನಚಿತ್ರ ಸಂಕಲನ ಹೀಗೆ 7 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇದರಂತೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ’ಎಮ್ಮಾ ಸ್ಟೋನ್’, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ’ಕ್ರಿಸ್ಟೋಫರ್ ನೋಲನ್’, ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು’ರಾಬರ್ಟ್ ಡೌನಿ ಜೂನಿಯರ್’ ಗೆದ್ದುಕೊಂಡಿದ್ದಾರೆ.
ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ‘ದಿ ಝೋನ್ ಆಫ್ ಇಂಟರೆಸ್ಟ್’ ಗಳಿಸಿದೆ. ದಿ ಹೋಲ್ಡವರ್ಸ್ ಸಿನಿಮಾದಲ್ಲಿನ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು’ಡೇವಿನ್ ಜಾಯ್ ರಾಂಡೋಲ್ಫ್’ ಪಡೆದುಕೊಂಡಿದ್ದಾರೆ. ಇನ್ನು ಅತ್ಯುತ್ತಮ ಹಾಡು ವಿಭಾಗದಲ್ಲಿ ವಾಟ್ ವಾಸ್ ಐ ಮೇಡ್ ಫಾರ್ ನ ’ಬಾರ್ಬಿ’ ಗೆದ್ದುಕೊಂಡಿದೆ. ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್ ಪ್ರಶಸ್ತಿಯನ್ನು ‘ಗಾಡ್ಜಿಲ್ಲಾ ಮೈನಸ್ ಒನ್’, ಅತ್ಯುತ್ತಮ ಧ್ವನಿ ವಿನ್ಯಾಸ ಪ್ರಶಸ್ತಿಯನ್ನು ‘ದಿ ಝೋನ್ ಆಫ್ ಇಂಟರೆಸ್ಟ್’ ಪಡೆದುಕೊಂಡಿದೆ.
ಅತ್ಯುತ್ತಮ ಮೂಲ ಚಿತ್ರಕಥೆ ಪ್ರಶಸ್ತಿಯನ್ನು ಜಸ್ಟಿನ್ ಟ್ರೈಟ್ ಮತ್ತು ಆರ್ಥರ್ ಹರಾರಿ ಅವರ ‘ಅನ್ಯಾಟಮಿ ಆಫ್ ಎ ಫಾಲ್’, ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ಜಾನ್ ಮತ್ತು ಯೊಕೊ ಅವರ ‘ವಾರ್ ಇಸ್ ಓವರ್’ ಗಳಿಸಿದೆ. ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ಪ್ರಶಸ್ತಿಯನ್ನು ಹಯಾವೊ ಮಿಯಾಜಾಕಿ ಮತ್ತು ತೋಶಿಯೊ ಸುಜುಕ್ ಅವರ ‘ದಿ ಬಾಯ್ ಅಂಡ್ ದಿ ಹೆರಾನ್’, ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ ಪ್ರಶಸ್ತಿಯನ್ನು ‘ಪೂರ್ ಥಿಂಗ್ಸ್’ ಹಾಗೂ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ಪ್ರಶಸ್ತಿಯನ್ನು ‘ದಿ ಲಾಸ್ಟ್ ರಿಪೇರಿ ಶಾಪ್’ ಗಳಿಸಿದೆ.