ಇಸ್ಲಾಮಾಬಾದ್, ಮೇ.11(DaijiworldNews/AA): ಅಬಕಾರಿ ನೀತಿ ಪ್ರಕರಣದಲ್ಲಿಜೂನ್ 1 ರವರೆಗೆ ಮಧ್ಯಂತರ ಜಾಮೀನು ಪಡೆದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಗ್ಗೆ ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಸಂತಸ ವ್ಯಕ್ತಪಡಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಬಿಡುಗಡೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮೋದಿ ಜಿ ಅವರು ಮತ್ತೊಂದು ಯುದ್ಧದಲ್ಲಿ ಸೋಲು ಕಂಡಿದ್ದಾರೆ. ಕೇಜ್ರಿವಾಲ್ ಅವರ ಬಿಡುಗಡೆಯು ಭಾರತದ ಜನತೆಗೆ ಒಳ್ಳೆಯ ಸಂದೇಶವಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದರೊಂದಿಗೆ ಎಕ್ಸ್ ನಲ್ಲಿ ಮತ್ತೊಂದು ಪೋಸ್ಟ್ ಮಾಡಿರುವ ಅವರು, ಪಾಕಿಸ್ತಾನದಲ್ಲಿ ಕಾನೂನು ಅಪಾಯದಲ್ಲಿದೆ. ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಚೌಧರಿ ಅವರು ಬೇರೆ ಬೇರೆ ಪ್ರಕರಣಗಳಲ್ಲಿ ಬಂಧಿಯಾಗಿದ್ದರು ಎಂದಿದ್ದಾರೆ.
ಫವಾದ್ ಹುಸೇನ್ ಅವರು ಈ ಹಿಂದೆ ಇಮ್ರಾನ್ ಖಾನ್ ಸಂಪುಟದಲ್ಲಿ ಸಚಿವರಾಗಿದ್ದರು. ಈ ಹಿಂದೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿಗೆ ಸಂಬಂಧಿಸಿದ ವಿಡಿಯೊವನ್ನು ಪೋಸ್ಟ್ ಮಾಡಿ, ಅವರನ್ನು ಹೊಗಳಿರುವುದಾಗಿ ವರದಿಯಾಗಿತ್ತು. ಅದರ ಬೆನ್ನಲ್ಲೇ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.