ಕ್ಯಾನ್ಬೆರಾ, ಮೇ.25 (DaijiworldNews/AA): ಹಮಾಸ್ ಉಗ್ರರ ಥೀಮ್ ನಲ್ಲಿ ಕೇಕ್ ತಯಾರಿಸಿ 4ರ ಬಾಲಕನ ಹುಟ್ಟುಹಬ್ಬ ಆಚರಿಸಿ ಇದೀಗ ವ್ಯಾಪಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಬಾಲಕನ ಹುಟ್ಟುಹಬ್ಬದ ಹಿನ್ನೆಲೆ ಕೇಕ್ ಅನ್ನು ವಿಭಿನ್ನವಾಗಿ ತಯಾರಿಸಲಾಗಿತ್ತು. ಈ ಕೇಕ್ ನಲ್ಲಿ ಪ್ಯಾಲೆಸ್ತೀನ್ ಧ್ವಜಗಳಿಂದ ಸುತ್ತುವರಿದಿರುವ ಉಗ್ರಗಾಮಿಗಳನ್ನು ಚಿತ್ರಿಸಲಾಗಿತ್ತು. ಈ ಕೇಕ್ ತಯಾರಿಸಿದ ಆಸ್ಟ್ರೇಲಿಯನ್ ಬೇಕರಿ ಪ್ಯಾಲೇಸ್ಟಿನಿಯನ್ ಧ್ವಜದಿಂದ ಅಲಂಕರಿಸಲ್ಪಟ್ಟ ದೊಡ್ಡ ಕೇಕ್ ಪಕ್ಕದಲ್ಲಿ ಬಾಲಕ ನಿಂತಿರುವ ಹಾಗೂ ಹಮಾಸ್ನ ವಕ್ತಾರ ಅಬು ಒಬೈದಾ ಅವರ ಬೆರಳನ್ನು ಮೇಲಕ್ಕೆತ್ತಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ಇತ್ತ ಬಾಲಕನು ಕೂಡ ತಲೆಗೆ ಸ್ಕಾರ್ಫ್ ಮತ್ತು ಕೇಕ್ ಮೇಲಿನ ಆಕೃತಿಯನ್ನು ಹೋಲುವ ಉಡುಪನ್ನು ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾನೆ. ಹೀಗಾಗಿ ಈ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಳಿಕ ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ತನಿಖೆಗಿಳಿದಿದ್ದಾರೆ. ಇನ್ನು ಈ ಪೋಟೋಗಳಿಗೆ ಮೊದಮೊದಲು ಉತ್ತಮ ಕಾಮೆಂಟ್ ಗಳು ಬಂದರೂ, ಆ ನಂತರ ಭಾರೀ ವಿರೋಧ ವ್ಯಕ್ತವಾಗಿದೆ. ಮಗುವನ್ನು ಭಯೋತ್ಪಾದಕನಂತೆ ಬಿಂಬಿಸುವುದು ಖಂಡನೀಯ ಎಂಬ ಕಂಮೆಟ್ ಗಳನ್ನು ಬಂದಿವೆ. ತೀವ್ರ ವಿರೋಧದ ಬಳಿಕ ಫೋಟೋ ಅಪ್ಲೋಡ್ ಮಾಡಿದವರು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನ ಪ್ರಧಾನಿ ಕ್ರಿಸ್ ಮಿನ್ಸ್ ಅವರು, ಇದೊಂದು ಭಯಾನಕ ಬೆಳವಣಿಗೆಯಾಗಿದೆ. ಹಮಾಸ್ ಒಂದು ದುಷ್ಟ ಭಯೋತ್ಪಾದಕ ಸಂಘಟನೆಯಾಗಿದೆ. ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳು ಮುಗ್ಧ ಮತ್ತು ವಿನೋದಮಯವಾಗಿರಬೇಕು. ಈ ರೀತಿ ದ್ವೇಷಪೂರಿತವಾಗಿರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.