ಪೋರ್ಟ್ ಮೋರ್ಸ್ಬಿ, ಮೇ 26 (DaijiworldNews/AA): ಭೂಕುಸಿತದಿಂದಾಗಿ ಸುಮಾರು 670 ಮಂದಿ ಸಾವನ್ನಪಿದ್ದ ದಾರುಣ ಘಟನೆ ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ್ದು, ಇಡೀ ಗ್ರಾಮವೇ ಸ್ಮಶಾನವಾಗಿ ಮಾರ್ಪಟ್ಟಿದೆ.
ಎಂಗಾ ಪ್ರಾಂತ್ಯದ ಯಂಬಾಳಿ ಗ್ರಾಮದ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಭಾರೀ ಪ್ರಮಾಣದ ಮಳೆಯಿಂದಾಗಿ ಉಂಟಾದ ಈ ಭೂಕುಸಿತದಲ್ಲಿ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇನ್ನೂ ನೂರಾರು ಮಂದಿ ಅವಶೇಷಗಳ ಅಡಿಯಲ್ಲಿ ಮುಚ್ಚಿಹೋಗಿದ್ದಾರೆ. ಈಗಾಗಲೇ ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಲಾಗಿದ್ದು, ಇಡೀ ಗ್ರಾಮವೇ ನರಕ ಸದೃಶ್ಯವಾಗಿದೆ.
ಸುಮಾರು 150 ಮನೆಗಳು ಭೂಕುಸಿತದಿಂದಾಗಿ ಭೂಮಿಯಲ್ಲಿ ಹುದುಗಿಗೋಗಿದೆ. ಘಟನಾ ಸ್ಥಳದಲ್ಲಿ ಮಳೆಯ ನೀರು ನಿರಂತರವಾಗಿ ಹರಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಶುಕ್ರವಾರದಿಂದಲೂ ಸಾಲು ಸಾಲಾಗಿ ಭೂಕುಸಿತ ಸಂಭವಿಸುತ್ತಿದ್ದು, ಶುಕ್ರವಾರವೇ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಆ ಬಳಿಕ ಸಾವಿನ ಸಂಖ್ಯೆ ಏಕಾಏಕಿ ಏರಿಕೆಯಾಗಿದೆ.
ಭೂಕುಸಿತದಲ್ಲಿ ಸಂಬಂಧಿಕರನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ. ಹೀಗಾಗಿ ಭೂಕುಸಿತ ಉಂಟಾದ ಸ್ಥಳದಲ್ಲಿ ಸಂಬಂಧಿಕರನ್ನು ಹುಡುಕಲು ಭೂನಿಯನ್ನು ಅಗೆಯುತ್ತಿದ್ದಾರೆ. ಹೀಗಾಗಿ ಜನರನ್ನು ನಿಯಂತ್ರಿಸುವುದು ಸಿಬ್ಬಂದಿಗಳಿಗೆ ಕಷ್ಟವಾಗಿದೆ. ಅವಶೇಷಗಳನ್ನು ತೆರವುಗೊಳಿಸುವಲ್ಲಿ ಸಿಬ್ಬಂದಿಗಳಿಗೆ ಜನರು ಸಾಥ್ ನೀಡುತ್ತಿದ್ದಾರೆ. ಇನ್ನು ಈ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನಲ್ಲಿ 4 ಸಾವಿರ ಜನ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.