ಪೋರ್ಟ್ ಮೊರ್ಸ್ಬಿ, ಮೇ 28(DaijiworldNews/AA): ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಯಾನಕ ಭೂಕುಸಿದಿಂದ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಸಂತ್ರಸ್ತರ ನೆರವಿಗೆ ಭಾರತ ಮುಂದಾಗಿದ್ದು, ಒಂದು ಮಿಲಿಯನ್ ಅಮೇರಿಕನ್ ಡಾಲರ್ ತುರ್ತು ಆರ್ಥಿಕ ನೆರವು ನೀಡುವುದಾಗಿ ಇಂದು ಘೋಷಿಸಿದೆ.
ಮೇ 24 ರಂದು ಪವುವಾ ನ್ಯೂಗಿನಿಯಾದ ಎಂಗಾ ಪ್ರಾಂತ್ಯದ ಯಂಬಾಳಿ ಗ್ರಾಮದ ಸುತ್ತಮುತ್ತ ಈ ಭೂಕುಸಿತ ಸಂಭವಿಸಿತ್ತು. ಇದರಲ್ಲಿ ಸುಮಾರು 2,000 ಅಧಿಕ ಮಂದಿ ಸಾವನ್ನಪ್ಪಿ, ಸಾವಿರಾರು ಮಂದಿ ಗಾಯಗೊಂಡಿದ್ದರು. ಇದೀಗ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಸಹಾಯ ಮಾಡಲು ಭಾರತ ಸಿದ್ಧವಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಭಾರತ-ಪೆಸಿಫಿಕ್ ದ್ವೀಪ ರಾಷ್ಟ್ರಗಳ ಸಹಕಾರ ವೇದಿಕೆಯ ಆಪ್ತ ಸ್ನೇಹಿತ ಹಾಗೂ ಪಾಲುದಾರನಾಗಿ ಪಪುವಾ ನ್ಯೂಗಿನಿಯ ಜನರೊಂದಿಗೆ ಒಗ್ಗಟ್ಟಿನ ಸೂಚಕವಾಗಿ ಭಾರತ ಸರ್ಕಾರವು, ಹಾನಿಗೊಳಗಾದ ಜನರ ಪುನರ್ವಸತಿ ಮತ್ತು ಪುನರ್ನಿರ್ಮಾಣದ ಭಾಗವಾಗಿ ಒಂದು ಮಿಲಿಯನ್ ಅಮೆರಿಕನ್ ಡಾಲರ್ ತುರ್ತು ನೆರವನ್ನು ಘೋಷಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿದೆ.
ಇನ್ನು ಈ ಬಗ್ಗೆ ಮತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಪಪುವಾ ನ್ಯೂಗಿನಿಯಲ್ಲಿ ಉಂಟಾದ ಹಾನಿಯು ತೀವ್ರ ನೋವನ್ನುಂಟು ಮಾಡಿದೆ. ಪಪುವಾ ನ್ಯೂಗಿನಿ ಜನರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ.