ಇಸ್ಲಾಮಾಬಾದ್, ಜೂ 01(DaijiworldNews/AA): ಆಜಾದ್ ಕಾಶ್ಮೀರ ಅಥವಾ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ದೇಶದ ಅವಿಭಾಜ್ಯ ಅಂಗವಲ್ಲ ಎಂದು ಕೊನೆಗೂ ಪಾಕಿಸ್ತಾನ ಒಪ್ಪಿಕೊಂಡಿದೆ.
ಈ ಬಗ್ಗೆ ಸರ್ಕಾರಿ ವಕೀಲರೊಬ್ಬರು ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದು, ಈ ಘಟನೆ ಇಡೀ ಪಾಕ್ ದೇಶದಲ್ಲೇ ಸಂಚಲನ ಮೂಡಿಸಿದೆ. ಪಿಒಕೆ ವಿದೇಶಿ ಪ್ರದೇಶವಾಗಿದ್ದು, ಭಾರತದ ಅವಿಭಾಜ್ಯ ಅಂಗವೆಂದು ಪರಿಗಣಿಸಲ್ಪಟ್ಟಿದೆ. ಆದರೆ ಪಾಕಿಸ್ತಾನವು ಆಜಾದ್ ಕಾಶ್ಮೀರ ಎಂದು ಹೇಳಿಕೊಂಡು ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂಬುದಾಗಿ ವಕೀಲರು ಪ್ರತಿಪಾದಿಸಿದ್ದಾರೆ.
ಅಪಹರಣಕ್ಕೊಳಗಾದ ಕವಿ ಹಾಗೂ ಪತ್ರಕರ್ತ ಅಹ್ಮದ್ ಫರ್ಹಾದ್ ಅವರನ್ನು ಜೂನ್ 2ರ ವರೆಗೆ ಕಾಶ್ಮೀರದಲ್ಲಿ ಬಂಧನದಲ್ಲಿರಿಸಲಾಗಿದೆ. ಪಿಒಕೆಯು ವಿದೇಶಿ ಪ್ರದೇಶ ಆಗಿರುವುದರಿಂದ ಅವರನ್ನ ಇಸ್ಲಾಮಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದಿಲ್ಲ ಎಂದು ವಕೀಲರು ವಾದ ಮಂಡಿಸಿದ್ದಾರೆ.
ವಕೀಲರ ವಾದವನ್ನು ಆಲಿಸಿದ ಇಸ್ಲಾಮಾಬಾದ್ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಆಜಾದ್ ಕಾಶ್ಮೀರವು ವಿದೇಶಿ ನೆಲವಾಗಿದ್ದರೆ, ಪಾಕಿಸ್ತಾನದ ಅವಿಭಾಜ್ಯ ಅಂಗವಲ್ಲ ಎನ್ನುವುದಾದರೆ ಪಾಕಿಸ್ತಾನದ ಮಿಲಿಟರಿ ಮತ್ತು ಪಾಕಿಸ್ತಾನಿ ರೇಂಜರ್ಗಳು ಪಾಕ್ನಿಂದ ಹೇಗೆ ಅಲ್ಲಿಗೆ ಪ್ರವೇಶಿಸಿದರು ಎಂದು ಪ್ರಶ್ನೆ ಮಾಡಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಸ್ಥಾನಮಾನದ ಕುರಿತು ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲರ ವಿರುದ್ಧ ಪಾಕ್ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕ್ನ ಪ್ರಮುಖ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ವಕೀಲರ ವಾದವನ್ನು ಖಂಡಿಸಿದ್ದಾರೆ. ಈ ಮಧ್ಯೆ ಕೆಲವರು ಭಾರತದ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ.