ಮಾಲೆ, ಜೂ. 08(DaijiworldNews/AA): ನರೇಂದ್ರ ಮೋದಿ ಅವರು ಜೂನ್ 9ರಂದು 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೂ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನು ಆಹ್ವಾನಿಸಲಾಗಿದೆ.
ಭಾರತ ಸರ್ಕಾರದ ಮಂತ್ರಿಗಳ ಪರಿಷತ್ ನೀಡಿದ ಆಹ್ವಾನವನ್ನು ಸ್ವೀಕರಿಸಲಾಗಿದೆ ಎಂದು ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದ ಹೈಯರ್ ಕಮಿಷನರ್ ಮುನು ಮಹಾವರ್ ಅವರು ಮಾಲ್ಡೀವ್ಸ್ ಅಧ್ಯಕ್ಷರನ್ನು ಖುದ್ದಾಗಿ ಭೇಟಿ ಮಾಡಿ ಸಮಾರಂಭದ ಆಹ್ವಾನ ಪತ್ರಿಕೆ ನೀಡಿದ್ದಾರೆ. ಇನ್ನು ಅಧ್ಯಕ್ಷ ಮುಯಿಝು ಅವರು ಆಹ್ವಾನ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಆಮಂತ್ರಣವನ್ನು ಖುದ್ದಾಗಿ ತಲುಪಿಸಿದ್ದಕ್ಕಾಗಿ ಹೈಕಮಿಷನರ್ ಅವರಿಗೆ ಕೂಡ ಧನ್ಯವಾದ ತಿಳಿಸಿದ್ದಾರೆ.
ಇನ್ನು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಹಾಜರಾಗಿ ಮೋದಿ ಅವರಿಗೆ ಗೌರವ ನೀಡಲಾಗುವುದು. ಭಾರತದೊಂದಿಗಿನ ನಿಕಟ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಪ್ರಧಾನ ಮಂತ್ರಿಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಮಾಲ್ಡೀವ್ಸ್-ಭಾರತದ ಸಂಬಂಧಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಈ ಭೇಟಿಯಿಂದ ಸಾಬೀತಾಗಿದೆ ಎಂದರು.