ಒಟ್ಟಾವಾ, ಜೂ. 10(DaijiworldNews/AA): ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಭಾರತೀಯ ಮೂಲದ ಯುವಕನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಯುವರಾಜ್ ಗೋಯಲ್ (28) ಹತ್ಯೆಯಾದ ಯುವಕ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ರೆಯ ಮನ್ವಿರ್ ಬಸ್ರಾಮ್ (23), ಸಾಹಿಬ್ ಬಸ್ರಾ (20), ಹರ್ಕಿರತ್ ಜುಟ್ಟಿ (23) ಮತ್ತು ಒಂಟಾರಿಯೊದ ಕೆಲೋನ್ ಫ್ರಾಂಕೋಯಿಸ್ (20) ಎಂಬ ನಾಲ್ವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಜೂನ್ 7ರ ಬೆಳಗ್ಗೆ ಗುಂಡಿನ ದಾಳಿ ನಡೆದಿತ್ತು. ಈ ದಾಳಿ ನಡೆದ ಸಂಬಂಧ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಪಂಜಾಬ್ ಮೂಲದ ಯುವರಾಜ್ ಗೋಯಲ್ ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕನ ಸಹೋದರಿ ಚಾರು ಸಿಂಘ್ಲಾ ಅವರು ಸರ್ರೆಯಲ್ಲಿನ ಕಾರ್ ಡೀಲರ್ಶಿಪ್ನಲ್ಲಿ ಗೋಯಲ್ ಕೆಲಸ ಮಾಡುತ್ತಿದ್ದನು. ಅಲ್ಲದೇ ಸಹೋದರನನ್ನು ಯಾಕೆ ಕೊಲೆ ಮಾಡಿದ್ದಾರೆ ಎಂದು ತಿಳಿದಿಲ್ಲ. ಅವನು ಅಂತಹ ಯಾವುದೇ ಕೆಲಸಗಳಲ್ಲಿ ಭಾಗಿಯಾಗುವವನಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನು ಗೋಯಲ್ ಅವರ ಸೋದರ ಮಾವ ಬವಾನ್ದೀಪ್ ಅವರು, ಯುವರಾಜ್ ಎಂದಿನಂತೆ ಜಿಮ್ ಮುಗಿಸಿ, ಭಾರತದಲ್ಲಿ ವಾಸವಾಗಿರುವ ತನ್ನ ತಾಯಿಯೊಂದಿಗೆ ಫೋನಿನಲ್ಲಿ ಮಾತಾಡಿಕೊಂಡು ಬಂದು ಮನೆ ಹತ್ತಿರ ಕಾರು ನಿಲ್ಲಿಸಿ ಇಳಿಯುತ್ತಿದ್ದಂತೆಯೇ ಆತನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗೋಯಲ್ ಹತ್ಯೆಗೆ ಕಾರಣವಿನ್ನು ತಿಳಿದುಬಂದಿಲ್ಲ. ಹತ್ಯೆಗೆ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಘಟನೆ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಕೂಡ ಪರಿಶೀಲನೆ ನಡೆಸಲು ಪೊಲೀಸರು ಮುಂದಾಗಿರುವುದಾಗಿ ತಿಳಿದುಬಂದಿದೆ.