ಕುವೈತ್, ಜೂ. 12(DaijiworldNews/AA): ದಕ್ಷಿಣ ಕುವೈತ್ ನ ಮಂಗಾಫ್ ನಗರದಲ್ಲಿನ ಕಟ್ಟಡವೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 5 ಮಂದಿ ಭಾರತೀಯರು ಸೇರಿ 41 ಮಂದಿ ಮೃತಪಟ್ಟಿದ್ದಾರೆ. ಹಾಗೂ ಈ ದುರಂತದಲ್ಲಿ 30ಕ್ಕಿಂತಲೂ ಅಧಿಕ ಭಾರತೀಯರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕಟ್ಟಡದಲ್ಲಿ ಸುಮಾರು 195 ಮಂದಿ ವಾಸಿಸುತ್ತಿದ್ದರು. ಅದರಲ್ಲೂ ಈ ಕಟ್ಟಡದಲ್ಲಿ ಹೆಚ್ಚಾಗಿ ಮಲಯಾಳಿಗಳು ವಾಸಿಸುತ್ತಿದ್ದರು. ಮೃತ ಐವರ ಪೈಕಿ ಇಬ್ಬರು ತಮಿಳುನಾಡಿನವರು ಹಾಗೂ ಉಳಿದವರು ಉತ್ತರ ಭಾರತದವರು ಎನ್ನಲಾಗುತ್ತಿದೆ.
ಅಗ್ನಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಹಾಗೂ ಗಾಯಗೊಂಡ ಎಲ್ಲರನ್ನೂ ಅಗತ್ಯ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಇನ್ನು ಗಾಯಕೊಂಡವರಿಗೆ ಸೂಕ್ತ ವೈದ್ಯಕೀಯ ಆರೈಕೆ ಒದಗಿಸಲು ವೈದ್ಯಕೀಯ ತಂಡಗಳು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿವೆ ಎಂದು ಕುವೈತ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಂದು ಮುಂಜಾನೆ 4:30ರ ಸುಮಾರಿಗೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಕಂಡು ಕೆಲವರು ಅಪಾರ್ಟ್ಮೆಂಟ್ನಿಂದ ಜಿಗಿದು ಮೃತಪಟ್ಟಿದ್ದರೆ ಇತರರು ಸುಟ್ಟಗಾಯಗಳು ಮತ್ತು ಹೊಗೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.