ಇಸ್ಲಾಮಾಬಾದ್, ಜೂ. 14(DaijiworldNews/AA): ಪಾಕಿಸ್ತಾನ ಫಾರ್ ಇಸ್ಲಾಂ ಎಂಬುದನ್ನು ಪ್ರಶ್ನಿಸಿರುವ ಪಾಕ್ನ ಹಿರಿಯ ಪತ್ರಕರ್ತ ಇಮ್ರಾನ್ ಶಫ್ಕತ್ ಅವರು 1947ರಲ್ಲಿ ಹಿಂದೂಗಳ ದೇವಾಲಯಗಳನ್ನು ಲೂಟಿ ಮಾಡಿ, ಅವರ ಆಸ್ತಿಗಳನ್ನು ವಶಪಡಿಸಿಕೊಂಡು ಪಾಕಿಸ್ತಾನ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಇದೀಗ ಅವರ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಪತ್ರಕರ್ತ ಇಮ್ರಾನ್ ಶಫ್ಕತ್ ಅವರು ಇತ್ತೀಚಿಗೆ ಈ ಹೇಳಿಕೆಯನ್ನು ನೀಡಿದ್ದು, ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವಿವಾದ ಮತ್ತು ಚರ್ಚೆಯನ್ನು ಸೃಷ್ಟಿಸಿದೆ. ಪಾಕಿಸ್ತಾನದ ಸೃಷ್ಟಿಯ ಮೂಲವನ್ನು ಟೀಕಿಸಿರುವ ಇಮ್ರಾನ್ ಶಫ್ಕತ್ ಅವರು, ತಮ್ಮ ಯೂಟ್ಯೂಬ್ ಚಾನೆಲ್ 'ಟೆಲ್ಲಿಂಗ್ಸ್ ವಿತ್ ಇಮ್ರಾನ್ ಶಫ್ಕತ್'ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ವಿಡಿಯೋದ ತುಣುಕನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ವೈರಲ್ ಆದ ಈ ವಿಡಿಯೋ ತುಣುಕಿನಲ್ಲಿ, ಶಫ್ಕತ್ ನೀಡಿರುವ ಹೇಳಿಕೆಗಳು ಭಾರೀ ಅಚ್ಚರಿ ಮೂಡಿಸಿದೆ. ಅವರು ಪಾಕಿಸ್ತಾನದ ಸೃಷ್ಟಿಯ ಐತಿಹಾಸಿಕ ಆಧಾರವನ್ನು ಪ್ರಶ್ನೆ ಮಾಡಿದ್ದಾರೆ.
ಪಾಕ್ನ ಸ್ಥಾಪನೆಯ ಬಗ್ಗೆ ಶಫ್ಕತ್ ಅನೇಕ ಗಮನಾರ್ಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವನ್ನು ರಚಿಸಿದ ಮೊದಲ ದಿನ ಅದನ್ನು ಇಸ್ಲಾಂ ಹೆಸರಿನಲ್ಲಿ ಮಾಡಲಾಯಿತು ಎಂಬುದೆಲ್ಲ ಸುಳ್ಳು. ಪಾಕ್ನ ಸ್ಥಾಪಕರು ಸಲ್ಲಿಸಿರುವ ಆರಂಭಿಕ ದಾಖಲೆಗಳೆಲ್ಲವು ದೊಡ್ಡ ಸುಳ್ಳು. ಕೇವಲ ಇಸ್ಲಾಮಿಕ್ ತತ್ತ್ವಗಳ ಮೇಲೆ ಪಾಕಿಸ್ತಾನವನ್ನು ಸೃಷ್ಟಿಸಲಾಗಿದೆ ಎಂಬ ನಿರೂಪಣೆಯು ತಪ್ಪುದಾರಿಗೆಳೆಯುತ್ತಿದೆ ಎಂದು ಅವವರು ಆರೋಪಿಸಿದ್ದಾರೆ.
ಪಾಕಿಸ್ತಾನ ರಚನೆಯಾದ ಸ್ವಲ್ಪ ಸಮಯದ ಬಳಿಕ ಲಾಹೋರ್ನಲ್ಲಿ ಮುಸ್ಲಿಮರು ಬಲವಂತವಾಗಿ ದೇವಸ್ಥಾನ ಪ್ರವೇಶಿಸಿದ್ದಾರೆ. ವಿಗ್ರಹಗಳನ್ನು ಕದ್ದರು ಮತ್ತು ಹಿಂದೂ ಒಡೆತನದ ಅಂಗಡಿಗಳು ಮತ್ತು ಭೂಮಿಯನ್ನು ವಶಪಡಿಸಿಕೊಂಡರು. ದೇವಾಲಯದ ಬೀಗಗಳನ್ನು ಒಡೆದು ವಿಗ್ರಹಗಳನ್ನು ಕದ್ದಿರುವ ಲಾಹೋರ್ನ ಮುಸ್ಲಿಮರು, ಹಿಂದೂ ಅಂಗಡಿಗಳನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದರು. ಇದು ಪಾಕ್ನ ಅಡಿಪಾಯವಾಗಿದೆ ಎಂದು ಅವರು ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕುವುದರೊಂದಿಗೆ ವಿವಾದ ಸೃಷ್ಟಿಸಿದೆ.