ಜೆರುಸಲೇಂ, ಜೂ.23(DaijiworldNews/AA): ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದಾಗಿನಿಂದ ಆ ದೇಶದ ಪರಿಸ್ಥಿತಿಯೇ ಬದಲಾಗಿದೆ. ಇಸ್ರೇಲ್ ನ ಮಹಿಳೆಯರು ತಮ್ಮ ಆತ್ಮರಕ್ಷಣೆಗಾಗಿ ಬಂದೂಕು ಖರೀದಿಗೆ ಮುಂದಾಗಿದ್ದು, ಸುಮಾರು 42,000 ಮಹಿಳೆಯರು ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.
2023ರ ಅಕ್ಟೋಬರ್ 7ರಂದು ಹಮಾಸ್ ದಾಳಿ ನಡೆಸಿದ್ದು, ಈ ದಾಳಿಯ ಬಳಿಕ ಬಂದೂಕಿಗಾಗಿ ಅರ್ಜಿ ಸಲ್ಲಿಸಿರುವವರ ಪ್ರಮಾಣ 3 ಪಟ್ಟು ಏರಿಕೆಯಾಗಿದೆ. ಇದುವರೆಗೆ ಅರ್ಜಿ ಸಲ್ಲಿಸಿರುವ 42,000 ಮಹಿಳೆಯರ ಪೈಕಿ 18,000 ಅರ್ಜಿಗಳಿಗೆ ಈಗಾಗಲೇ ಅನುಮೋದನೆ ದೊರೆತಿದೆ ಎಂದು ಇಸ್ರೇಲ್ ರಕ್ಷಣ ಸಚಿವಾಲಯ ಮಾಹಿತಿ ನೀಡಿದೆ.
ಸಂಪೂರ್ಣ ಇಸ್ರೇಲ್ ಹಾಗೂ ಇಸ್ರೇಲ್ ಮಿಲಿಟರಿ ವಶದಲ್ಲಿರುವ ಪಶ್ಚಿಮ ದಂಡೆಯಲ್ಲಿರುವ 15,000 ಮಹಿಳೆಯರು ಬಂದೂಕುಗಳನ್ನು ಹೊಂದಿದ್ದಾರೆ. 10,000 ಮಹಿಳೆಯರು ಬಂದೂಕು ಪರವಾನಿಗೆಗೆ ಕಡ್ಡಾಯವಾಗಿರುವ ತರಬೇತಿ ಪಡೆಯಲು ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.