ವಾಷಿಂಗ್ಟನ್ ಡಿಸಿ, ಜು.27(DaijiworldNews/AA): ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಅಧಿಕೃತವಾಗಿ ತಮ್ಮ ಉಮೇದುವಾರಿಕೆಯನ್ನು ಘೋಷಿಸುವ ಕಡತಗಳಿಗೆ ಸಹಿ ಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಇಂದು, ನಾನು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕೆ ನನ್ನ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸುವ ಫಾರ್ಮ್ಗಳಿಗೆ ಸಹಿ ಮಾಡಿದ್ದೇನೆ. ಪ್ರತಿ ಮತವನ್ನು ಗಳಿಸಲು ನಾನು ಶ್ರಮಿಸುತ್ತೇನೆ. ಜನಪರವಾದ ನಮ್ಮ ಅಭಿಯಾನಕ್ಕೆ ನವೆಂಬರ್ನಲ್ಲಿ ಗೆಲುವು ಆಗಲಿದೆ" ಎಂದು ಬರೆದುಕೊಂಡಿರುವ ಅವರು ತಾವು ಕಡತಗಳಿಗೆ ಸಹಿ ಹಾಕುತ್ತಿರುವ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.
ನವೆಂಬರ್ 5 ರಂದು ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಹಿಂದೆ ಸರಿದ ನಂತರ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ನಡುವೆ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಯುಎಸ್ ಅಧ್ಯಕ್ಷೀಯ ಹುದ್ದೆಗೆ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರನ್ನು ಸಾರ್ವಜನಿಕವಾಗಿ ಅನುಮೋದನೆ ನೀಡಿದರು.
ಕಮಲಾ ಹ್ಯಾರಿಸ್ ಅವರು ಅಧ್ಯಕ್ಷರಾಗಿ ಚುನಾಯಿತರಾದರೆ ಅಮೇರಿಕಾ ಅಧ್ಯಕ್ಷರಾಗುವ ಮೊದಲ ಕಪ್ಪುವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆ ಭಾಜನರಾಗಲಿದ್ದಾರೆ.