ಟೆಲ್ ಅವಿವ್, ಜು.31(DaijiworldNews/AA): ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಹಮಾಸ್ನ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹಾಗೂ ಅವರ ಅಂಗರಕ್ಷಕರ ಪೈಕಿ ಓರ್ವನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಇರಾನ್ನ ಚುನಾಯಿತ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಟೆಹ್ರಾನ್ನಲ್ಲಿದ್ದರು. ಈ ವೇಳೆ ಅವರೊಂದಿಗೆ ಓರ್ವ ಅಂಗರಕ್ಷಕರೂ ಇದ್ದರು. ಕಾರ್ಯಕ್ರಮ ಮುಗಿದ ಬಳಿಕ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಈ ದಾಳಿಯಲ್ಲಿ ಹನಿಯೆಹ್ ಹಾಗೂ ಒರ್ವ ಅಂಗರಕ್ಷಕ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದಾಳಿಯ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ವರದಿಯನ್ನು ಮತ್ತೆ ಪ್ರಕಟಿಸುವುದಾಗಿ ಹಮಾಸ್ ಹೇಳಿಕೆ ನೀಡಿದೆ.
ಇಸ್ರೇಲ್ ಮೇಲೆ ನಡೆದ ದಾಳಿಯ ಬಳಿಕ ಇಸ್ಮಾಯಿಲ್ ಹನಿಯೆಹ್ ಅವರನ್ನು ಹತ್ಯೆ ಮಾಡಿ ಹಮಾಸ್ ಗುಂಪನ್ನು ನಾಶಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು. ಈ ಹಿನ್ನೆಲೆ 1,195 ಜನರು ಸಾವನ್ನಪ್ಪಿದರು. ಇದೀಗ ಇಸ್ರೇಲ್ ದಾಳಿಯಲ್ಲಿ ಹಮಾಸ್ ಮುಖ್ಯಸ್ಥನನ್ನ ಹತ್ಯೆಗೈದಿದ್ದು ಪ್ರತಿಕಾರ ತೀರಿಸಿಕೊಂಡಿದೆ ಎನ್ನಲಾಗಿದೆ.