ಬೀಜಿಂಗ್, ಆ.09(DaijiworldNews/AA): ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಜಗತ್ತಿನ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದೆ ಎಂದು ಚೀನಾ ತಿಳಿಸಿದೆ.
ದಕ್ಷಿಣ ಚೀನಾ ಸಮುದ್ರ ವಿಚಾರವಾಗಿ ಈಗಾಗಲೇ ಹಲವು ದೇಶಗಳಲ್ಲಿ ಮಿಲಿಟರಿ ಮತ್ತು ರಾಜತಾಂತ್ರಿಕ ಸಂಘರ್ಷ ನಡೆಯುತ್ತಲೇ ಇದೆ. ಇದೀಗ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾದ ನಂತರ ಈ ಕಿತ್ತಾಟವು ಮತ್ತಷ್ಟು ಹೆಚ್ಚಾಗಲಿದೆ.
ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿರುವ ವಿಚಾರವನ್ನು ಚೀನಾ ಸರ್ಕಾರ ರಾಷ್ಟ್ರೀಯ ಕಡಲಾಚೆಯ ತೈಲ ನಿಗಮ ತಿಳಿಸಿದೆ. ಇದಕ್ಕೆ ಸಂಬಂಧಿತ ಸರ್ಕಾರಿ ಅಧಿಕಾರಿಗಳು ಡೇಟಾವನ್ನು ಅನುಮೋದಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಅನಿಲ ನಿಕ್ಷೇಪ ಇರುವ ಪ್ರದೇಶವು ವಿವಾದಿತ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯೊಳಗೆ ಇದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.
ಲಿಂಗ್ಶುಯಿ 36-1 ಹೆಸರಿನ ನೈಸರ್ಗಿಕ ಅನಿಲ ನಿಕ್ಷೇಪ ಇರುವ ಜಾಗ ಚೀನಾದ ದಕ್ಷಿಣದ ದ್ವೀಪ ಪ್ರಾಂತ್ಯದ ಹೈನಾನ್ನ ಆಗ್ನೇಯ ಭಾಗದ ನೀರಿನಲ್ಲಿದೆ. ದಕ್ಷಿಣ ಚೀನಾ ಸಮುದ್ರ ವಿಚಾರವಾಗಿ ಈಗಾಗಲೇ ಫಿಲಿಪೈನ್ಸ್, ವಿಯೆಟ್ನಾಂ, ಮಲೇಷ್ಯಾ, ಬ್ರೂನಿ ಮತ್ತು ತೈವಾನ್ ಜೊತೆ ಚೀನಾ ಕಿತ್ತಾಟ ನಡೆಸುತ್ತಿದೆ. ಈ ಸಣ್ಣ ದೇಶಗಳಿಗೆ ಅಮೆರಿಕ, ಐರೋಪ್ಯ ಒಕ್ಕೂಟ, ಜಪಾನ್ ಹಾಗೂ ಇತರ ಮಿತ್ರರಾಷ್ಟ್ರಗಳು ಬೆಂಬಲ ನೀಡುತ್ತಿದೆ.