ವಾಷಿಂಗ್ಟನ್, ಆ.13(DaijiworldNews/AA): ಅಮೇರಿಕಾದಲ್ಲಿ ಭಾರತದ ರಾಯಭಾರಿಯಾಗಿ ವಿನಯ್ ಮೋಹನ್ ಕ್ವಾತ್ರಾ(61) ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ವಿನಯ್ ಮೋಹನ್ ಕ್ವಾತ್ರಾ ಅವರು ಇತ್ತೀಚಿನವರೆಗೂ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಹಿಂದೆ ಅವರು ಫ್ರಾನ್ಸ್ ಮತ್ತು ನೇಪಾಳಕ್ಕೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು.
ವಿನಯ್ ಮೋಹನ್ ಕ್ವಾತ್ರಾ ಅವರು ತರಂಜಿತ್ ಸಿಂಗ್ ಸಂಧು ಅವರ ಉತ್ತರಾಧಿಕಾರಿಯಾಗಿದ್ದಾರೆ. ಕಳೆದ ಜುಲೈ 14 ರಂದು ನಿವೃತ್ತರಾದ ಅವರು 2020 ರಿಂದ 2024ರ ಅವಧಿಗೆ ಯುಎಸ್ನಲ್ಲಿ ಭಾರತದ ಉನ್ನತ ರಾಜತಾಂತ್ರಿಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಸದ್ಯ ಅವರು ಅಮೇರಿಕಾದಲ್ಲಿ ಭಾರತದ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೊಸತ ಮಾಡಿರುವ ಚಾರ್ಜ್ ಡಿ ಅಫೇರ್ಸ್ ಶ್ರೀಪ್ರಿಯಾ ರಂಗನಾಥನ್ ಅವರು, ಅಮೆರಿಕಗೆ ಭಾರತದ ಹೊಸ ರಾಯಭಾರಿಯಾಗಿ ಕ್ವಾತ್ರಾ ಅವರನ್ನು ಸ್ವಾಗತಿಸಲು ನಮಗೆ ಸಂತೋಷವಾಗಿದೆ. ನಾವೆಲ್ಲರೂ ಅವರ ನಾಯಕತ್ವದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.