ನವದೆಹಲಿ,ಮೇ 23 (Daijiworld News/MSP): ಲೋಕಸಭೆ ಚುನಾವಣೆ ಫಲಿತಾಂಶ ದಿಕ್ಕು ಸಾಗುತ್ತಿರುವ ರೀತಿ ಗಮನಿಸಿದರೆ ಮೋದಿ ನೇತೃತ್ವದ ಎನ್ಡಿಎ ಒಕ್ಕೂಟ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯೋದು ಬಹುತೇಕ ಪಕ್ಕಾ ಆಗಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯ ಮುಂದೆ ಮಹಾಘಟಬಂಧನ ಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬಿಜೆಪಿ ನಿರೀಕ್ಷೆಗೂ ಮೀರಿದ ಮುನ್ನಡೆ ಸಾಧಿಸಿದೆ.
ಈ ಸಾರಿಯೂ ಅಭೂತಪೂರ್ವ ವಿಜಯದೊಂದಿಗೆ ಎನ್ಡಿಎ ಮುಂದುವರಿಯುತ್ತಿವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪ್ರಪಂಚದ ಗಣ್ಯಾತೀಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೆಲಿಗ್ರಾಮ್ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಇನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರೂ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ನಿಮ್ಮ ನಾಯಕತ್ವವನ್ನು ಮತ್ತೊಮ್ಮೆ ದೃಢಪಡಿಸಿದೆ. ಭಾರತ ಹಾಗೂ ಇಸ್ರೇಲ್ ನಡುವಿನ ಸ್ನೇಹ ಸಂಬಂಧವನ್ನ ಉತ್ತಮಗೊಳಿಸಲು ಪ್ರಯತ್ನಿಸೋಣ. ವೆಲ್ಡನ್ ಮೈ ಫ್ರೆಂಡ್ ಅಂತಾ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚ್ಯುಕ್, ಕರೆ ಮಾಡಿ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಇದಲ್ಲದೆ ಜಪಾನ್ ಪ್ರಧಾನಿ ಶಿಂಜೋ ಅಬೆ, ಕೂಡಾ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ವಿಶೇಷ ಎಂದರೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಹ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ.