ಮಂಗಳೂರು, ಆ 17 (DaijiworldNews/MS): ಸಾಫ್ಟ್ ವೇರ್ ಕಂಪೆನಿಗಳಲ್ಲಿ ಉದ್ಯೋಗವಿದೆ ಎಂದು ಭಾರತೀಯ ಸಮುದಾಯದ ಉದ್ಯೋಗಾಕಾಂಕ್ಷಿಗಳನ್ನೇ ಟಾರ್ಗೆಟ್ ಮಾಡಿ ಬಲೆ ಬೀಸುವ ಕಾಂಬೋಡಿಯಾದ ಸೈಬರ್ ಅಪರಾಧಿಗಳು ಭಾರತೀಯರನ್ನು ಬಳಸಿಕೊಂಡು ಭಾರತೀಯರನ್ನೇ ದೋಚುತ್ತಿದ್ದು, ಇದೀಗ ಈ ವಂಚನೆಯ ಜಾಲವನ್ನು ವಿದೇಶಾಂಗ ಇಲಾಖೆ ಪತ್ತೆ ಹಚ್ಚಿದೆ. ಜೊತೆಗೆ ಭಾರತದ ಸುಮಾರು 250 ಮಂದಿಯನ್ನು ರಕ್ಷಣೆ ಮಾಡಿದ್ದು ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ದ.ಕ. ಮೂಲದ ಈ ಮೂವರು ಕೆಲ ತಿಂಗಳುಗಳ ಹಿಂದೆ ಆಂಧ್ರಪ್ರದೇಶದ ಏಜೆಂಟ್ ಓರ್ವನ ಮೂಲಕ ವಿದೇಶದ ಉದ್ಯೋಗದ ಆಸೆಯಿಂದ ಕಾಂಬೋಡಿಯಾಕ್ಕೆ ತೆರಳಿದ್ದರು. ಅಲ್ಲಿ ಐಟಿ ಕಂಪೆನಿಯ ಉದ್ಯೋಗವಿದೆ ಎಂದು ಕಳುಹಿಸಿದ್ದು ಸೈಬರ್ ವಂಚಕರ ಬಳಿ. ಅಲ್ಲಿ ತಲುಪುತ್ತಿದ್ದಂತೆ ಪಾಸ್ಪೋರ್ಟ್ ಕಿತ್ತುಕೊಂಡು, ದಿನದ 12 ಗಂಟೆ ಕಾಲ ಗುಲಾಮರಂತೆ ದುಡಿಸಿಕೊಳ್ಳುತ್ತಿದ್ದರು.
ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂಗಳಲ್ಲಿ ಹುಡುಗಿಯ ಹೆಸರಿನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸುವುದು, ಷೇರು ಮಾರುಕಟ್ಟೆ, ಕ್ರಿಪ್ಟೋದಲ್ಲಿ ಹೂಡಿಕೆ ನೆಪದಲ್ಲಿ ಭಾರತೀಯರಿಗೆ ಕರೆ ಮಾಡಿ ವಂಚಿಸುವ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ದಿನಕ್ಕೆ ಇಷ್ಟು ಲಕ್ಷವನ್ನು ಸಂಗ್ರಹಿಸಿ ಕೊಡುವಂತೆ ಹಿಂಸಿಸಲಾಗುತ್ತಿತ್ತು.ಕೆಲವೊಮ್ಮೆ ಆ ಹಣದಲ್ಲಿ ಸ್ವಲ್ಪ ನೀಡುತ್ತಿದ್ದರು. ಭಾರತಕ್ಕೆ ತಲುಪಿರುವ ದಕ್ಷಿಣ ಕನ್ನಡ ಜಿಲ್ಲೆಯ ಸ್ಟೀವನ್ ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಹೀಗೆ:
ಕಳೆದ ವರ್ಷದ ಕೊನೆಯಲ್ಲಿ ಕೇಂದ್ರ ಸರ್ಕಾರದ ಹಿರಿಯ ಉದ್ಯೋಗಿಯೊಬ್ಬರು ತಮಗೆ 67 ಲಕ್ಷ ರೂ. ಅಧಿಕ ಹಣ ವಂಚನೆಯಾಗಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದಾಗ ಈ ಹಗರಣದ ಕುರಿತು ಪೊಲೀಸರಿಗೆ ಮಾಹಿತಿ ಹೊರಬಂದಿತ್ತು. ಒಡಿಶಾದ ರೂರ್ಕೆಲಾ ಪೊಲೀಸರು ಕಳೆದ ಡಿಸೆಂಬರ್ 30 ರಂದು ಸೈಬರ್ ಕ್ರೈಮ್ ಸಿಂಡಿಕೇಟ್ ಅನ್ನು ಭೇದಿಸಿದಾಗ ಕೆಲವರು ಜನರನ್ನು ಕಾಂಬೋಡಿಯಾಕ್ಕೆ ಅಕ್ರಮವಾಗಿ ರವಾನಿಸುವ ಕೆಲಸದಲ್ಲಿ ತೊಡಗಿರುವುದು ಬೆಳಕಿಗೆ ಬಂದಿತ್ತು. ಈ ಮಾಹಿತಿಯನ್ನು ಪೊಲೀಸರು ಭಾರತೀಯ ವಿದೇಶಾಂಗ ಇಲಾಖೆ ಜತೆ ಹಂಚಿಕೊಂಡಿದ್ದರು.
ಉದ್ಯೋಗಕ್ಕಾಗಿ ಕಾಂಬೋಡಿಯಾಗೆ ಪ್ರಯಾಣಿಸುವವರು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅನುಮೋದಿಸಿದ ಅಧಿಕೃತ ಏಜೆಂಟರ ಮೂಲಕ ಮಾತ್ರ ಉದ್ಯೋಗ ಪಡೆದುಕೊಳ್ಳಬೇಕು ಎಂದು ಈ ವರ್ಷದ ಆರಂಭದಲ್ಲಿ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ.