ಕುಂದಾಪುರ, ಆ.17(DaijiworldNews/AA): ಕೋಲ್ಕತ್ತಾದಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ, ಕುಂದಾಪುರದ ವೈದ್ಯರು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕುಂದಾಪುರ ಶಾಖೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.







ಕುಂದಾಪುರದ ಶಾಸ್ತ್ರಿ ಸರ್ಕಲ್ನಿಂದ ಆರಂಭಗೊಂಡ ವೈದ್ಯರ ಮೌನ ಮೆರವಣಿಗೆಯು ಪಾರಿಜಾತ ಸರ್ಕಲ್ ಸರ್ಕಲ್, ಹೊಸ ಬಸ್ ನಿಲ್ದಾಣ ಮೂಲಕವಾಗಿ ಕುಂದಾಪುರದ ಮಿನಿ ವಿಧಾನನಸೌಧದವರೆಗೆ ನಡೆಯಿತು.
ಬಳಿಕ ಐಎಂಎ ಕುಂದಾಪುರ ಶಾಖೆ ಅಧ್ಯಕ್ಷೆ ಡಾ| ಪ್ರಮೀಳಾ ನಾಯಕ್, ಸರಕಾರಿ ವೈದ್ಯಾಧಿಕಾರಿಗಳ ಜಿಲ್ಲಾ ಸಂಘದ ಅಧ್ಯಕ್ಷ ಡಾ| ನಾಗೇಶ್ ನೇತೃತ್ವದಲ್ಲಿ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ಮಹೇಶ್ಚಂದ್ರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಭಾರತೀಯ ವೈದ್ಯಕೀಯ ಸಂಘದ ಕುಂದಾಪುರ ಶಾಖೆ ಕಾಯದರ್ಶಿ ಡಾ| ಮಹಿಮಾ ಆಚಾರ್ಯ ಮಾತನಾಡಿ, ಕೊಲ್ಕತ್ತಾದಲ್ಲಿ ವೃತ್ತಿ ನಿರತ ವೈದ್ಯೆಯನ್ನು ಆಸ್ಪತ್ರೆಯಲ್ಲೇ ಕೊಲೆ ಮಾಡಿರುವುದು ಗಂಭೀರ ವಿಚಾರ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ವೈದ್ಯರು ಸಹ ಮನುಷ್ಯರು. ನಮಗೂ ಹಕ್ಕಿದೆ. ಕೆಲಸ ಮಾಡುವ ಜಾಗದಲ್ಲಿ ಸುರಕ್ಷತೆ ಬೇಕು. ಮಹಿಳಾ ವೈದ್ಯರು, ನರ್ಸಿಂಗ್ ಯುವತಿಯರಿಗೆ ರಕ್ಷಣೆ ಕೊಡಿಯೆಂದು ಸರಕಾರಕ್ಕೆ, ಜನಸಾಮಾನ್ಯರಿಗೆ ವಿನಂತಿ. ವೃತ್ತಿ ಜಾಗದಲ್ಲಿ ವೈದ್ಯರ ಸುರಕ್ಷತೆಗಾಗಿ ಕೇಂದ್ರೀಯ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಘಟನೆ ಮನಕುಲ ನಾಚಿಸುವಂತಹ, ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರ. ಪ್ರತೀ ಬಾರಿ ಈ ಘಟನೆ ನಡೆದಾಗ ಪ್ರತಿಭ ನಡೆಯುತ್ತದೆ. ಆದರೆ ವೈದ್ಯರು, ವೈದ್ಯಕೀಯ ಸಿಬಂದಿ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ. ೨೦೦೮ರ ಮೆಡಿಕಲ್ ಕಾಯ್ದೆಯಲ್ಲಿ ನಮಗೆ ಕೊಟ್ಟಿರುವ ರಕ್ಷಣೆ ಇನ್ನೂ ಕೂಡ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಇಡೀ ನಾಗರಿಕ ಸಮಾಜ ಇಂತಹ ಘಟನೆಗಳನ್ನು ಖಂಡಿಸಬೇಕು. ವೈದ್ಯಕೀಯ ರಂಗಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ಬೇಕು. ಈ ದಿನ ಶಾಂತಿಯುತ ಪ್ರತಿಭಟನೆ ನಡೆಸಿದ್ದು, ಬೇಡಿಕೆ ಈಡೇರದಿದ್ದಲ್ಲಿ ನಾವು ಸಹ ಎಲ್ಲರಂತೆಯೇ ಬೀದಿಗಿಳಿದು ಹೋರಾಡಬೇಕಾದ ಪರಿಸ್ಥಿತಿಯನ್ನು ಸರಕಾರ ಮಾಡಬಾರದು ಎಂದು ಸರಕಾರಿ ವೈದ್ಯಾಧಿಕಾರಿಗಳ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷ ಡಾ| ನಾಗೇಶ್ ಒತ್ತಾಯಿಸಿದರು.
ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ್, ಐಎಂಎ ಕುಂದಾಪುರ ಶಾಖೆಯ ಪ್ರಮುಖರು, ಸರಕಾರಿ ವೈದ್ಯಾಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ. ಉಮೇಶ್ ನಾಯಕ್, ಉಡುಪಿ ದಂತ ವೈದ್ಯರ ಸಂಘದ ಅಧ್ಯಕ್ಷ ಡಾ| ಜಗದೀಶ್ ಜೋಗಿ, ಕಾಯದರ್ಶಿ ಡಾ| ಅತುಲ್, ಆಯುಷ್ ವೈದ್ಯರ ಸಂಘದ ಡಾ| ಹರಿಪ್ರಸಾದ್ ಶೆಟ್ಟಿ, ಕಾಯದರ್ಶಿ ಡಾ| ಕೃಷ್ಣ ರಾವ್, ಮೆಡಿಕಲ್ ಪ್ರತಿನಿಧಿಗಳ ಸಂಘದ ವಸಂತ ಉಡುಪ, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್, ಇನ್ನರ್ ವೀಲ್ ಕ್ಲಬ್ನ ಸರೇಖಾ ಪುರಾಣಿಕ್, ಪದಾಧಿಕಾರಿಗಳು, ಸದಸ್ಯರು, ಕುಂದಾಪುರದ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು, ವೈದ್ಯರು, ಸಿಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.