ಮಂಗಳೂರು, ಆ.17(DaijiworldNews/AA): ಕೋಲ್ಕತ್ತಾದಲ್ಲಿ ಇತ್ತೀಚೆಗೆ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ಗಳ ವೈದ್ಯರು ಹಾಗೂ ಸಿಬ್ಬಂದಿ ಹೊರರೋಗಿ ವಿಭಾಗ ಬಂದ್ ಮಾಡಿ ೨೪ ಗಂಟೆಗಳ ಪ್ರತಿಭಟನೆ ನಡೆಸಿದರು.
























ನಗರದ ಐಎಂಎ ಹೌಸ್ನಿಂದ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಗೇಟಿನ ಬಳಿ ಕೊನೆಗೊಂಡಿತು. ಐಎಂಎ ವತಿಯಿಂದ ನಡೆದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಐಎಂಎ ಪದಾಧಿಕಾರಿಗಳು, ದಂತವೈದ್ಯಕೀಯ, ಆಯುಷ್, ರೆಡ್ಕ್ರಾಸ್ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳು, ನರ್ಸಿಂಗ್ ವೈದ್ಯಕೀಯ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ, ನ್ಯಾಯಕ್ಕಾಗಿ ಆಗ್ರಹದ ಫಲಕ ಹಿಡಿದುಕೊಂಡು ಪಾಲ್ಗೊಂಡಿದ್ದರು.
ಈ ಪ್ರತಿಭಟನೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್. ಡಾ.ಭರತ್ ಶೆಟ್ಟಿ ಬೆಂಬಲ ಸೂಚಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರು ಡಿಸಿ ಕಚೇರಿವರೆಗೆ ತೆರಳಲು ಮುಂದಾದರೂ ಪೊಲೀಸರು ಅನುಮತಿ ನೀಡಲಿಲ್ಲ. ಬಳಿಕ ಪ್ರತಿಭಟನಾಕಾರರ ಬಳಿಗೆ ಆಗಮಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, ಮನವಿ ಸ್ವೀಕರಿಸಿ ಅದನ್ನು ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ಆಶ್ವಾಸನೆ ನೀಡಿದರು.
ದಾರುಣವಾಗಿ ಅತ್ಯಾಚಾರಗೊಂಡು ಕೊಲೆಗೀಡಾದ ಕೋಲ್ಕತ್ತಾದ ವೈದ್ಯೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಘಟನೆಯ ತನಿಖೆಯನ್ನು ಸಿಬಿಐ ವಹಿಸಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಐಎಂಎ ಅಧ್ಯಕ್ಷ ಡಾ.ಅಶೋಕನ್, ನಿಯೋಜಿತ ಅಧ್ಯಕ್ಷೆ ಡಾ.ಜೆನ್ಸಿ ಮರಿಯಾ ಡಿಸೋಜಾ, ಡಾ.ರಂಜನ್ ಭಾಗವಹಿಸಿದ್ದರು.