ಮಂಗಳೂರು, ಅ.17(DaijiworldNews/AA): ನಗರದ ಹ್ಯಾಮಿಲ್ಟನ್ ವೃತ್ತದ ಬಳಿಯ ಇಂದಿರಾ ಕ್ಯಾಂಟೀನ್ ಬಳಿ ನಡೆದ ಖಾಸಗಿ ಬಸ್ ನಿರ್ವಾಹಕ ರಾಜೇಶ್ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

ಮಂಗಳೂರು-ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್ನಲ್ಲಿ ನಿರ್ವಾಹಕರಾಗಿದ್ದ ರಾಜೇಶ್ ಅವರ ಮೃತದೇಹವು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಮೃತದೇಹವನ್ನು ಪೊಲೀಸರು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದರು.
ಬಳಿಕ ಮೃತ ರಾಜೇಶ್ ಅವರು ಬಜಪೆಯವರಾಗಿದ್ದು, ಅವರಿಗೆ ತಂದೆ, ತಾಯಿ ಇಲ್ಲ. ಸಹೋದರಿ ಮಾತ್ರ ಇದ್ದಾರೆ ಎಂಬ ವಿಷಯ ತಿಳಿದುಬಂದಿದೆ. ನಂತರ ರಾಜೇಶ್ ಅವರ ಕುಟುಂಬಸ್ಥರು ಬಂದು ಮೃತದೇಹ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ರಾಜೇಶ್ ಅವರು ಮಂಗಳೂರಿನಲ್ಲೇ ರೂಮ್ನಲ್ಲಿ ಉಳಿದುಕೊಂಡು ಬಸ್ ನಿರ್ವಾಹಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ರಾಜೇಶ್ ಹಣದ ವ್ಯವಹಾರವನ್ನು ಮಾಡುತ್ತಿದ್ದು, ಇದೇ ಕಾರಣದಿಂದ ಕೊಲೆ ನಡೆದಿರಬಹುದೋ ಅಥವಾ ಬೇರೆ ಯಾವುದೋ ಕಾರಣಕ್ಕೆ ಕೊಲೆ ಮಾಡಲಾಗಿದೆಯೋ ಎಂಬುದು ತನಿಖೆಯ ಬಳಿಕ ಬೆಳಕಿಗೆ ಬರಲಿದೆ. ಇನ್ನು ಸ್ಟೇಟ್ಬ್ಯಾಂಕ್ ಪರಿಸರದ ಸಿಸಿ ಕೆಮರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳ ಕುರಿತು ಸುಳಿವು ಸಿಕ್ಕಿದೆ ಎಂದು ಹೇಳಲಾಗುತ್ತಿದೆ.