ಬೆಳ್ತಂಗಡಿ, ಅ.26(DaijiworldNews/AA): ನೂತನವಾಗಿ ಆಯ್ಕೆಯಾದ ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಇಂದು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕು ಆಸ್ಪತ್ರೆಗೆ ಸಂಬಂಧಿಸಿದ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಲಾಯಿತು. ಡಯಾಲಿಸೀಸ್ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿರುವ 12 ಯಂತ್ರಗಳ ಪೈಕಿ 1 ಯಂತ್ರ ಕೆಟ್ಟು ಹೋಗಿ ತಿಂಗಳಾದರೂ ರಿಪೇರಿ ಮಾಡದ ಬಗ್ಗೆ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಡಯಾಲೀಸಸ್ ಯಂತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ಹೊರಗಡೆ ಬೇಕಾಬಿಟ್ಟಿ ಇಟ್ಟಿರುವ ಬಗ್ಗೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಾಗ ಸ್ಟಾಕ್ ರೂಂ ನ ಕೊರತೆಯಿಂದ ಹೊರಗಡೆ ಇಡಬೇಕಾದ ಅನಿವಾರ್ಯ ಪರಿಸ್ಥಿತಿ ಬಗ್ಗೆ ಸಿಬ್ಬಂದಿಗಳು ಮಾಹಿತಿ ನೀಡಿದರು. ಡಯಾಲೀಸಸ್ ಕೇಂದ್ರದ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು ಎಂದು ಸದಸ್ಯರು ತಿಳಿಸಿದರು.
ಜನರ ಆರೋಗ್ಯ ಕಾಪಾಡಬೇಕಾದ ತಾಲೂಕು ಆಸ್ಪತ್ರೆಯ ಸುತ್ತಮುತ್ತ ಬೆಳೆದಿರುವ ಹುಲ್ಲು, ಗಿಡಗಂಟಿಗಳನ್ನು ಕಡಿದು ಸ್ವಚ್ಛ ಮಾಡದ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳ ಬಳಿ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ಒಂದು ವಾರದೊಳಗೆ ಸ್ವಚ್ಛಗೊಳಿಸಲು ತಿಳಿಸಲಾಯಿತು. ಆಸ್ಪತ್ರೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಸಲು ಸೂಚಿಸಲಾಯಿತು. ಕೆಲವೊಂದು ವೈದ್ಯರು ಖಾಸಗಿ ಕ್ಲಿನಿಕ್ ಹೊಂದಿದ್ದು, ರೋಗಿಗಳನ್ನು ತಮ್ಮ ಕ್ಲಿನಿಕ್ ಗಳಿಗೆ ಬರಲು ಹೇಳುವುದು, ಔಷಧ ಚೀಟಿಗಳನ್ನು ಖಾಸಗಿ ಮೆಡಿಕಲ್ ಗಳಿಗೆ ನೀಡುವುದು, 108 ಅಂಬುಲೆನ್ಸ್ ಲಭ್ಯವಾಗದ ಸಂದರ್ಭದಲ್ಲಿ ಸರ್ಕಾರಿ ಅಂಬುಲೆನ್ಸ್ ಇದ್ದರೂ ಖಾಸಗಿ ಅಂಬುಲೆನ್ಸ್ ಗಳಲ್ಲಿ ರೋಗಿಗಳನ್ನು ಕಳುಹಿಸುವುದು, ರೋಗಿಗಳನ್ನು ಸರಿಯಾಗಿ ಪರೀಕ್ಷೆ ಮಾಡದೇ ಔಷಧ ನೀಡುವುದು, ರಕ್ತ ಪರೀಕ್ಷೆ ಸಂದರ್ಭದಲ್ಲಿ ಬೇಜಾವ್ದಾರಿಯಿಂದ ವರ್ತನೆ ಬಗ್ಗೆ ಆಡಳಿತ ವೈದ್ಯಾಧಿಕಾರಿ ಡಾ. ರಮೇಶ್ ರವರ ಗಮನಕ್ಕೆ ತರಲಾಯಿತು. 10 ದಿನಗಳ ನಂತರ ಮತ್ತೊಮ್ಮೆ ಭೇಟಿ ನೀಡುವ ಸಂದರ್ಭದಲ್ಲಿ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನವೀನ್ ಗೌಡ ಸವಣಾಲು, ಪಿ.ಟಿ ಸಭಾಸ್ಟಿಯನ್ ಕಳೆಂಜ, ಸವಿತಾ ಕೊರಗ ಅಟ್ರಿಂಜೆ, ವೀರೇಂದ್ರ ಕುಮಾರ್ ಜೈನ್ ಅಳದಂಗಡಿ, ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಬೆಳಾಲು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಬ್ದುಲ್ ಗಫೂರು ಪುದುವೆಟ್ಟು, ಜೀತಮುಕ್ತ ನಿರ್ಮೂಲನ ಸಮಿತಿ ಸದಸ್ಯ ಶೇಖರ್ ಲಾಯಿಲ, ತಾಲೂಕು ಆರೋಗ್ಯಾಧಿಕಾರಿ ಇಲಾಖೆಯ ಅಜಯ್ ಉಪಸ್ಥಿತರಿದ್ದರು.