ಉಳ್ಳಾಲ, ನ.01(DaijiworldNews/AA): ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ಯಾ ರೆಹಮತ್ ನಗರ ಕಜೆ ಬಾಕಿಮಾರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದ ಜೋಡಿಯನ್ನು ಮಂಗಳೂರು ನಗರ ದಕ್ಷಿಣ ಉಪವಿಭಾಗದ ಆಂಟಿ ಡ್ರಗ್ ಟೀಂ ನೇತೃತ್ವದ ಪೊಲೀಸ್ ತಂಡ ಬಂಧಿಸಿ, ಆರೋಪಿತರಿಂದ 2,04,000 ರೂ ಬೆಲೆಯ 8 ಕೆ.ಜಿ ಗಾಂಜಾ ವಶಪಡಿಸಿಕೊಂಡಿದೆ.
ಮಾಡೂರು ನಿವಾಸಿ ನಜೀರ್ ಹುಸೈನ್ (50) ಮತ್ತು ಕಿನ್ಯಾ ರೆಹಮತ್ ನಗರ ದ ಅಫ್ಸಾತ್ (37) ಎಂಬವರನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದೆ ಗಾಂಜಾ ಸಹಿತ ಮಾರಾಟಕ್ಕೆ ಯತ್ನಿಸುತ್ತಿದ್ದ ರೆನಾಲ್ಟ್ ಕ್ವಿಡ್ ಕಾರು ಹಾಗೂ ಎರಡು ಮೊಬೈಲುಗಳನ್ನು ವಶಪಡಿಸಿಕೊಂಡಿದೆ. ಒಟ್ಟು ರೂ. 5,14,810 ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಇಬ್ಬರ ವಿರುದ್ಧ 195/2024 ಕಲಂನಡಿ ಎನ್ ಡಿಪಿಎಸ್ ಆಕ್ಟ್ 1985 ಮತ್ತು ಬಿಎನ್ ಎಸ್ ಕಾಯಿದೆಗಳಡಿ ಪ್ರಕರಣಗಳು ದಾಖಲಾಗಿವೆ.