ಕುಂದಾಪುರ, ನ.01(DaijiworldNews/AK): ಕರ್ನಾಟಕದ ಬದುಕು ಕನ್ನಡ. ಕನ್ನಡಿಗರ ಬದುಕು ಕನ್ನಡ. ಅದರಲ್ಲೂ ಕರ್ನಾಟಕ ಏಕೀಕರಣಕ್ಕೆ ಕುಂದಾಪುರದ ಕೊಡುಗೆ ಅನನ್ಯ. ಕಲೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲಿ ಕುಂದಾಪುರ ಕನ್ನಡಿಗರ ಕೊಡುಗೆ ಬಹಳಷ್ಟಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ ಕೆ. ಹೇಳಿದರು. ಅವರು ಇಲ್ಲಿನ ಗಾಂಧೀ ಮೈದಾನದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಮಾಡಿ ಸಂದೇಶ ನೀಡಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕನ್ನಡವನ್ನು ಕೇವಲ ಭಾಷೆಯಾಗಿ ನೋಡಬೇಕಿಲ್ಲ. ಅದು ನಮ್ಮೊಳಗೆ ಹಾಸುಹೊಕ್ಕಾಗಿರುವ ಒಂದು ಸಂಸ್ಕೃತಿ ಎಂದರು.
ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ತಹಶೀಲ್ದಾರ್ ಮಲ್ಲಿಕಾರ್ಜುನ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ್, ತಾಲೂಕು ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಉಪತಹಶೀಲ್ದಾರ್ ವಿನಯ್, ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸದಸ್ಯರಾದ ದೇವಕಿ ಸಣ್ಣಯ್ಯ, ಸಂತೋಷ್ ಕುಮಾರ್ ಶೆಟ್ಟಿ, ಶ್ರೀಧರ ಶೇರೆಗಾರ್, ಸಂದೀಪ್ ಖಾರ್ವಿ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸಮಾಜ ಕಲ್ಯಾಣ ಇಲಾಖೆ ಮೆನೆಜರ್ ರಮೇಶ್ ಕುಲಾಲ್, ತಾ.ಪಂ. ಮೆನೇಜರ್ ರಾಮಚಂದ್ರ ಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿಯರು, ವಿವಿಧ ಇಲಾಖೆಯವರು ಉಪಸ್ಥಿತರಿದ್ದರು.
ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರ್ವಹಿಸಿದರು. ಸೈಂಟ್ ಮೆರಿಸ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೈಕೆಲ್ ಫುರ್ಟಾಡೊ ಸ್ಯಾಕ್ಸೋಫೋನ್ ಮೂಲಕ ಹಚ್ಚೇವು ಕನ್ನಡದ ದೀಪ ಹಾಡು ನುಡಿಸಿದರು. ವಿಕೆಆರ್ ಶಾಲೆಯ ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಹಾಡಿದರು. ವೆಂಕಟರಮಣ ಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಪೊಲೀಸರಿಂದ ಕನ್ನಡ ನಿರೂಪಣೆಯಲ್ಲಿ ನಡೆದ ಕವಾಯತು ಆಕರ್ಷಿಣೀಯವಾಗಿತ್ತು. ಎಸ್ಐ ಪ್ರಸಾದ್ ನೇತೃತ್ವ ವಹಿಸಿದ್ದರು.