ಉಡುಪಿ,ನ.01 (DaijiworldNews/TA):ಪ್ರಧಾನಮಂತ್ರಿಗಳ ಮೇಲೆ ನಮಗೆ ಗೌರವ ಇದೆ. ಅವರು ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಒಂದು ವೇಳೆ ಕಾಂಗ್ರೆಸ್ಸನ್ನು ಗುರಿಯಾಗಿರಿಸಿ ಅವರು ಮಾತನಾಡಿದ್ದಾರೆ ಅದು ಅಸಾಂವಿಧಾನಿಕವಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಕಾಂಗ್ರೆಸಿಗರು ನಗರ ನಕ್ಸಲರು ಎಂದು ಪ್ರಧಾನಿ ಮೋದಿಯವರ ಹೇಳಿಕೆಗೆ ಹೆಬ್ಬಾಳ್ಕರ್ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಇನ್ನು ವಕ್ಫ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಬ್ಬಾಳ್ಕರ್, ಎಲ್ಲಿಲ್ಲಿ ಅತಿಕ್ರಮಣ ಆಗಿದೆ ಅಲ್ಲೆಲ್ಲಾ ಕಂದಾಯ ಇಲಾಖೆ ನೋಟಿಸ್ ಕೊಡುವ ಕೆಲಸ ಮಾಡುತ್ತಿದೆ. ಒಂದಿಂಚೂ ಜಮೀನನ್ನೂ ಬಿಡಿಸಲ್ಲ, ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲ್ಲ, ಅನ್ಯಾಯ ಮಾಡಲ್ಲ. ಎಲ್ಲರನ್ನು ಸಮಾನರಾಗಿ ಕರೆದುಕೊಂಡು ಹೋಗೋದು ನಮ್ಮ ಉದ್ದೇಶ. ಸ್ವತಹ ಮುಖ್ಯಮಂತ್ರಿಗಳೇ ಈ ಬಗ್ಗೆ ಸ್ವಷ್ಟನೆ ನೀಡಿದ್ದಾರೆ. ಗೊಂದಲ ವಾತಾವರಣ ಸೃಷ್ಟಿ ಮಾಡುವವರ ಮೇಲೆ ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ ಅವರು ಬಸವರಾಜ್ ಯತ್ನಾಲ್ ಗೂ ತಿರುಗೇಟು ನೀಡಿದ್ದಾರೆ.
ಯತ್ನಾಲ್ ಗೆ ಕೇವಲ ಹಿಂದೂ ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ. ಅದನ್ನು ಹೇಳಿಕೊಂಡೆ ಅವರು ಗೆದ್ದುಕೊಂಡು ಬಂದಿದ್ದಾರೆ. ಎಂಎಲ್ಸಿ ವಿಶ್ವನಾಥ್ ಅವರು ಹಿರಿಯರಾಗಿದ್ದು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಬಿಡಬೇಕಿದೆ ಎಂದು ಅವರು ತಿಳಿಸಿದರು.