ಕಾರ್ಕಳ, ನ.24(DaijiworldNews/AA): ಆಹಾರ ಹುಡುಕಿ ಬಂದು ಬಾವಿಗೆ ಬಿದ್ದು, ಬಾವಿಯ ಪೊಟರೆಯಲ್ಲಿ ಅವಿತುಕುಳಿತುಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯ ಬಾವಿಗೆ ನ. 23ರ ರಾತ್ರಿ ಚಿರತೆಯೊಂದು ಬಿದ್ದಿತು. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದರು.
ಬಾವಿಯಿಂದ ಸುರಕ್ಷಿತವಾಗಿ ಚಿರತೆಯನ್ನು ಸೆರೆ ಹಿಡಿಯಲು, ಬಾವಿಯ ಮೇಲ್ಭಾಗದಲ್ಲಿ ಬಲೆಯನ್ನು ಅಳವಡಿಸಲಾಗಿತ್ತು. ಹಾಗೂ ಬೃಹದಾಕಾರದ ಏಣಿಯನ್ನು ಬಾವಿಗೆ ಇಳಿಸಲಾಗಿತ್ತು. ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯ ಫಲವಾಗಿ ಚಿರತೆಯು ಬೋನಿನಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆಯ ಕಾರ್ಯದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.