Karavali
ಮಂಗಳೂರು- ಸಾಧಕ ದೇವಾಡಿಗ ಯುವ ಪ್ರತಿಭೆಗಳಿಗೆ 'ಪ್ರಶಸ್ತಿ ಪ್ರದಾನ ಸಮಾರಂಭ
- Sun, Nov 24 2024 07:57:24 PM
-
ಮಂಗಳೂರು,ನ.24(DaijiworldNews/AK): ಯುವ ಸಾಧಕರ ಶ್ರೇಷ್ಠತೆಯನ್ನು ಗುರುತಿಸಿ, ಸಾರ್ವಜನಿಕವಾಗಿ ಅವರ ಸಾಧನೆಯನ್ನು ಬಹಿರಂಗಗೊಳಿಸುವ ಡಾ.ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಕಾರ್ಯ ನಿಜಕ್ಕೂ ಮಾದರಿಯಾಗಿದೆ. ಸಮಾಜದ ಪರಿವರ್ತನೆಯ ಜೊತೆಗೆ ಏಕತೆಯನ್ನು ಸಾಧಿಸು ಕಾರ್ಯ ಇಲ್ಲಿ ಆಗುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೋ. ಡಾ.ಪಿ.ಎಲ್ ಧರ್ಮ ಹೇಳಿದರು.
ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇವರ ಆಶ್ರಯದಲ್ಲಿ ನ.24 ಭಾನುವಾರ ಮಂಗಳೂರು ಮಣ್ಣಗುಡ್ಡದಲ್ಲಿರುವ ದೇವಾಡಿಗ ಸಮಾಜಭವನದಲ್ಲಿ ಹಮ್ಮಿಕೊಂಡ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ ದೇವಾಡಿಗ ಯುವ ಪ್ರತಿಭೆಗಳಿಗೆ 'ಪ್ರಶಸ್ತಿ ಪ್ರದಾನ ಸಮಾರಂಭ' ಉದ್ಘಾಟಿಸಿ ಅವರು ಮಾತನಾಡಿದರು.
ಟ್ರಸ್ಟ್ಗಳು ನಂಬಿಕೆಯ ಗುಡಿಗಳಂತೆ ಕಾರ್ಯನಿರ್ವಹಿಸುತ್ತದೆ. ಎಲ್ಲರ ನಂಬಿಕೆ, ವಿಶ್ವಾಸ ಗಳಿಸುವ ಕಾರ್ಯ ಇಲ್ಲಿಯಾಗುತ್ತಿದೆ. ಡಾ. ಕೆ.ವಿ ದೇವಾಡಿಗ ಟ್ರಸ್ಟ್ನಲ್ಲಿ ಚುನಾವಣೆ ನಡೆಯದೆ ಇರುವುದು ಇದೊಂದು ಹೃದಯದಿಂದ ಬೆಸೆದ ಟ್ರಸ್ಟ್ ಎಂಬುದಕ್ಕೆ ದೃಷ್ಟಾಂತವಾಗಿದೆ. ಇಂತಹ ದೂರಗಾಮಿ ಚಿಂತನೆಯ ಟ್ರಸ್ಟ್ ಮೂಲಕ ಅನಕ್ಷರತೆ ಹೋಗಲಾಡಿಸಬೇಕು. ಬೆಳೆಯುತ್ತಿರುವ ಭಾರತಕ್ಕೆ ದೇವಾಡಿಗ ಸಮಾಜ ಮಾದರಿಯಾಗಲಿ ಎಂದು ಕರೆಕೊಟ್ಟರು.
ಖ್ಯಾತ ನ್ಯೂರೋ ಸರ್ಜನ್ ಹಾಗೂ ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಕೆ.ವಿ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಯುಎಇ ದುಬೈ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೇಡಿಂಗ್ ಲಿಮಿಟೆಡ್ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ. ಅಂತಹ ಅವಕಾಶವನ್ನು ಸದುಪಯೋಗಪಡಿಸಿ ಕೊಂಡು ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಸಾಧನೆ ಮಾಡಿ ತಾನು ಬೆಳೆಯುವುದು ಮಾತ್ರವಲ್ಲದೆ ಫೋಷಕರ ಹಾಗೂ ದೇಶದ ಕೀರ್ತಿಯನ್ನು ವಿಶ್ವವ್ಯಾಪಿಯನ್ನಾಗಿ ಮಾಡಬೇಕು. ಸಾಧನೆಯ ಹಾದಿಯಲ್ಲಿ ಏಳು-ಬೀಳು ಸಹಜ. ಅದನ್ನು ಎದೆಗುಂದದೆ ಸಮಾನಾಗಿ ಎದುರಿಸಿ ಸತತ ಪ್ರಯತ್ನಗಳ ಮೂಲಕ ಯಶಸ್ಸು ಗಳಿಸಬೇಕು.
ಈ ನಿಟ್ಟಿನಲ್ಲಿ ಡಾ.ಕೆ.ವಿ ದೇವಾಡಿಗರು ಶ್ರೇಷ್ಠತೆಗೆ ಮತ್ತೊಂದು ಹೆಸರಾಗಿದ್ದು ಅವರಿಗಿರುವ ಸಮಾಜದ ಮೇಲಿನ ಕಾಳಜಿ, ಬದ್ದತೆ ನಮಗೆಲ್ಲರಿಗೆ ಮಾದರಿಯಾಗಿದೆ. ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಸಾಧ್ಯ. ಸುಲಭದಲ್ಲಿ ಯಾವುದನ್ನೂ ಪಡೆಯುವ ನಿರೀಕ್ಷೆ ಮಾಡಬಾರದು. ತಂದೆ-ತಾಯಿ, ಗುರು ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಕಲಿಯಬೇಕು. ಡಾ. ಕೆ.ವಿ ದೇವಾಡಿಗ ಅವರ ಸಾಧನೆ ನಮ್ಮೆಲ್ಲರಿಗೂ ಮಾದರಿಯಾಗಬೇಕಿದೆ. ನನ್ನ ಹೆಸರಿನಲ್ಲಿ ಎರಡು ಪ್ರಶಸ್ತಿಗಳನ್ನು ಇಂತಹ ಅತ್ಯುತ್ತಮ ವೇದಿಕೆಯಲ್ಲಿ ಸಾಧಕರಿಗೆ ನೀಡಿದ್ದು ನನಗೆ ಹೆಮ್ಮೆಯಾಗಿದೆ. ಇದಕ್ಕಾಗಿ ನಾನು ಡಾ. ಕೆ.ವಿ. ದೇವಾಡಿಗ ಚಾರಿಟೆಬಲ್ ಟ್ರಸ್ಟ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಡಾ. ಕೆ.ವಿ ದೇವಾಡಿಗರ ಜೊತೆಗಿನ ಬಾಂಧವ್ಯದ ಬಗ್ಗೆ ತಿಳಿಸಿದರು.
ಸಾಧನೆ ಮಾಡಲು ವಯಸ್ಸಿನ ಮಿತಿಯಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಅವರದ್ದೇ ಆದ ಆಸಕ್ತಿದಾಯಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧಿಸಿ, ಶ್ರೇಷ್ಠತೆ ಪಡೆಯಲು ಇಂದು ವಿಫುಲ ಅವಕಾಶಗಳಿದೆ. ಸಮಾಜ ಅಭಿವೃದ್ಧಿಗೊಳ್ಳಲು ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ ವ್ಯವಸ್ಥೆಯನ್ನು ಹೊಂದಬೇಕು ಎಂದು ದೇವಾಡಿಗ ಸಂಘಟನೆ ಚಿಂತನೆ ಹೊಂದಿದೆ. ಇಂದು ಸಾಧಕ ಪ್ರಶಸ್ತಿಯನ್ನು ಪಡೆಯುತ್ತಿರುವ ಎಲ್ಲರೂ ಬೇರೆಬೇರೆ ಕ್ಷೇತ್ರದಲ್ಲಿ ತಮ್ಮದೆ ಆದ ಸಾಧನೆ ಮಾಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇಂದಿನ ಯುವಕರು ಸಮಾಜ ಗಟ್ಟಿಗೊಳಿಸುವಲ್ಲಿ ಕ್ರಿಯಾಶೀಲರಾಗಬೇಕಿದೆ ಎಂದರು.
ಮಂಗಳೂರು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಪ್ರಾಂಶುಪಾಲರಾದ ಡಾ. ಮಾಲಿನಿ ಹೆಬ್ಬಾರ್, ಡಾ. ಕೆ.ವಿ ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷೆ ಡಾ. ಭಾವನ ಶೇರಿಗಾರ್, ಟ್ರಸ್ಟಿಗಳಾದ ಡಾ. ದಿವಾಕರ ರಾವ್, ಕೆ.ಜೆ ದೇವಾಡಿಗ, ಖಜಾಂಚಿ ಅಶೋಕ್ , ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಅಧ್ಯಕ್ಷ ಅಶೋಕ್ ಮೊಯ್ಲಿ, ಉಪಾಧ್ಯಕ್ಷ ಕರುಣಾಕರ್ ಎಮ್.ಎಚ್., ಕೋಶಾಧಿಕಾರಿ ಗೀತಾ ವಿ. ಕಲ್ಯಾಣಪುರ್, ಪ್ರಧಾನ ಕಾರ್ಯದರ್ಶಿ ಡಾ. ಸುಂದರ್ ಮೊಯ್ಲಿ, ಮಾಜಿ ಪ್ರಧಾನಕಾರ್ಯದರ್ಶಿ ಶಿವಾನಂದ ಮೊಯಿಲಿ ಮೊದಲಾದವರು ಇದ್ದರು.
ಟ್ರಸ್ಟ್ನ ಕಾರ್ಯದರ್ಶಿ ಡಾ. ದೇವರಾಜ್ ಕೆ. ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವೀಣಾ ಗಣೇಶ್, ತಿಲಕ್ ರಾಜ್ ಜಿ. ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಸುಂದರ ಮೊಯ್ಲಿ ವಂದಿಸಿದರು. ರಾಶಿ ವೈ. ದೇವಾಡಿಗ ಮತ್ತು ಐಶ್ವರ್ಯ ದೇವಾಡಿಗ ಅವರು ಪ್ರಾರ್ಥಿಸಿದರು.ಪ್ರಶಸ್ತಿ ಪ್ರದಾನ:
* ಡಾ. ಕೆ.ವಿ ದೇವಾಡಿಗ ಶ್ರೇಷ್ಠ ವೈದ್ಯಕೀಯ ಪದವಿ ವಿದ್ಯಾರ್ಥಿ-2024- ಡಾ. ಸಿಮ್ರಾನ್ ಸಾಲಿಯಾನ್ ಬೆಂಗಳೂರು ಪರವಾಗಿ ಜಯಲಕ್ಷ್ಮೀ ಸ್ವೀಕರಿಸಿದರು.
* ಡಾ. ಕೆ.ವಿ ದೇವಾಡಿಗ ಶ್ರೇಷ್ಠ ಸ್ನಾತಕೋತ್ತರ ವಿದ್ಯಾರ್ಥಿಗಳು-2024- ನೇಹಾ ಯಾದವ ದೇವಾಡಿಗ ಬೆಂಗಳೂರು, ಶರಣ್ ಕುಮಾರ್ ಬೆಂಗಳೂರು.
* ಶ್ರೀ ಹರೀಶ್ ಶೇರಿಗಾರ್ ಅತ್ಯುತ್ತಮ ಯುವ ಉದ್ಯಮಿ ಪ್ರಶಸ್ತಿ 2024- ತೇಜಸ್ ಸುಧಾಕರ್ ಬೆಂಗಳೂರು.
* ಶ್ರೀ ಹರೀಶ್ ಶೇರಿಗಾರ್ ಅತ್ಯುತ್ತಮ ಯುವ ಸಂಗೀತಗಾರ ಪ್ರಶಸ್ತಿ 2024- ಅಕ್ಷತಾ ಶೇರಿಗಾರ್ ಉಡುಪಿ
* ಡಾ. ಭಾವನಾ ಶೇರಿಗಾರ್ ಶ್ರೇಷ್ಠ ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿ ಪ್ರಶಸ್ತಿ 2024- ನಿಹಾಲ್ ಎನ್. ಬೆಂಗಳೂರು
* ಡಾ. ಭಾವನಾ ಶೇರಿಗಾರ್ ಶ್ರೇಷ್ಠ ಕಾಲೇಜು ಉಪನ್ಯಾಸಕರು 2024- ಡಾ. ಪ್ರಶಾಂತ್ ಕುಮಾರ್ ಕೆ. ಕಾರ್ಕಳ, ಡಾ. ಶೈನಿ ನವೀನ್ ಮಂಗಳೂರು.
* ಡಾ. ದಿವಾಕರ್ ರಾವ್ ಶ್ರೇಷ್ಠ ಪರಿಣಿತ ವ್ಯಕ್ತಿ/ಕೌಶಲ್ಯ ವ್ಯಕ್ತಿ ಪ್ರಶಸ್ತಿ 2024- ಶಿಶಿರ್ ಮೊಯಿಲಿ ವಾಮಂಜೂರು.
* ಡಾ. ಕೆ. ಜೆ. ದೇವಾಡಿಗ ಶ್ರೇಷ್ಠ ಯುವ ಕ್ರೀಡಾಪಟು ಪ್ರಶಸ್ತಿ 2024- ಸುಶ್ಮಿತಾ ರವೀಂದ್ರ ದೇವಾಡಿಗ ಉಜ್ಜೋಡಿ.
* ಶ್ರೀ ಅಶೋಕ್ ಶ್ರೇಷ್ಠ ಸಮಾಜ ಸೇವಕಿ ಪ್ರಶಸ್ತಿ 2024- ಜ್ಯೋತಿ ಪ್ರವೀಣ್, ಮಂಗಳೂರು.
* ಡಾ. ದೇವರಾಜ್ ಕೆ. ಶ್ರೇಷ್ಠ ಶಿಕ್ಷಕ ಪ್ರಶಸ್ತಿ 2024 (ಪ್ರೌಢ ಶಾಲೆ)- ವಿಘ್ನೇಶ್ ಜಿ.ಎಲ್ ಕುಂದಾಪುರ.
ದಿ| ಕೆ. ಲಕ್ಷ್ಮಣ್ ಸ್ಮರಣಾರ್ಥ ಮಂಗಳ ಶಾಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿನಿ ಕೆ.ಎಂ ಸಿಂಚನಾ ಮಂಗಳೂರು.