ಬಂಟ್ವಾಳ, ನ.24(DaijiworldNews/AK):ಯಾವುದೇ ಶುಭ ಕಾರ್ಯದ ಆಮಂತ್ರಣ ಪತ್ರಿಕೆಯನ್ನು ವಿಭಿನ್ನವಾಗಿ ಮುದ್ರಿಸುವುದು ಇತ್ತೀಚೆಗೆ ಫ್ಯಾಷನ್ ಆಗಿಬಿಟ್ಟಿದೆ.
ಬಂಟ್ವಾಳ ತಾಲೂಕಿನ ಮಾಣಿ ನಿವಾಸಿಯಾಗಿರುವ, ಪುತ್ತೂರಿನ ಗ್ರಾಫಿಕ್ಸ್ ಕಲಾವಿದ ಸುಮಂತ್ ಆಚಾರ್ಯ ರವರು ತನ್ನ ಪತ್ನಿ ಶಮಿತಾರವರ ಸೀಮಂತದ ಆಮಂತ್ರಣವನ್ನು ಬಾಳೆ ಎಲೆ ಮಾದರಿಯಲ್ಲಿ ಮುದ್ರಿಸಿ ಗಮನ ಸೆಳೆದಿದ್ದಾರೆ.
ಚಿಕ್ಕ ಬಾಳೆಎಲೆಯಂತೆ ಆಕರ್ಷಕವಾಗಿರುವ ಈ ಆಮಂತ್ರಣ ಪತ್ರಿಕೆಯಲ್ಲಿ ಅರಶಿನ ಕುಂಕುಮ, ಹೂವಿನ ಚಿತ್ತಾರದ ಜೊತೆಗೆ ಪುಂಸವನ ಸೀಮಂತೋನ್ನಯನ ಕ್ಕೆ ಬನ್ನಿ ಎಂಬ ಪ್ರೀತಿಯ ಆಹ್ವಾನವಿದೆ.
ಪುತ್ತೂರಿನಲ್ಲಿ ಪ್ರಿಂಟ್ ಹೌಸ್ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಸುಮಂತ್ ಆಚಾರ್ಯರು ತಮ್ಮ ಪರಿಕಲ್ಪನೆಯಂತೆ, ಆರ್ವಿ ಇಂಟರ್ ಗ್ರಾಫಿಕ್ಸ್ ನಲ್ಲಿ ಈ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸಗೊಳಿಸಿದ್ದಾರೆ.ಈಗಾಗಲೇ ತೆಂಗಿನಕಾಯಿ, ಹಿಂಗಾರ, ಬಳೆ, ಕೌಳಿಕೆ, ಅಡಿಕೆ, ವೀಳ್ಯದೆಲೆ ಹೀಗೆ ಸಾಂಪ್ರದಾಯಿಕ ವಿನ್ಯಾಸಗಳ ಸಾಲಿಗೆ ಬಾಳೆ ಎಲೆ ವಿನ್ಯಾಸದ ಆಮಂತ್ರಣ ಪತ್ರಿಕೆಯೂ ಸೇರಿಕೊಂಡು ಸಂಗ್ರಹಯೋಗ್ಯ ಎನ್ನಿಸಿಕೊಂಡಿದೆ.