ಮಂಗಳೂರು,ನ.25(DaijiworldNews/TA):ಬ್ರೇಕ್ ಫೇಲ್ ನಿಂದ ನಡೆದ ರಿಕ್ಷಾ ಅಪಘಾತದಲ್ಲಿ ಚಾಲಕ ಸಾವನ್ನಪ್ಪಿರುವ ಘಟನೆ ಕೊಣಾಜೆ ಕಲ್ಕಾರ್ ಎಂಬಲ್ಲಿ ಆದಿತ್ಯವಾರ ಸಂಜೆ ಸಂಭವಿಸಿದೆ.
ಕುಂಬಳೆ ಮಂಜಂತ್ತಡ್ಕ ನಿವಾಸಿ ನಾರಾಯಣ ಗಟ್ಟಿ (50) ಮೃತರು. ಉಳ್ಳಾಲದ ಕೊಲ್ಯ ಅಡ್ಕ ಸಮೀಪ ನಡೆದಿದ್ದ ಸಂಬಂಧಿಕರ ಹುಟ್ಟುಹಬ್ಬ ಸಮಾರಂಭಕ್ಕೆ ಕುಂಬಳೆಯಿಂದ ರಿಕ್ಷಾದಲ್ಲಿ ಆಗಮಿಸಿದ್ದ ಅವರು ಅಲ್ಲಿಂದ ಸಂಬಂಧಿಕರನ್ನು ಕೊಣಾಜೆ ಕಲ್ಕಾರ್ ಎಂಬಲ್ಲಿಗೆ ಬಿಟ್ಟು ಬರಲು ರಿಕ್ಷಾದಲ್ಲೇ ತೆರಳಿದ್ದರು.
ಕಲ್ಕಾರ್ ಇಳಿಜಾರು ಪ್ರದೇಶದಲ್ಲಿ ರಿಕ್ಷಾ ಇಳಿಯುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆ ರಿಕ್ಷಾ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಿಕ್ಷಾದೊಳಗಿದ್ದ ಮಹಿಳೆ, ಅವರ ಪುತ್ರ ಹಾಗೂ ಇನ್ನೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಾರಾಯಣ ಗಟ್ಟಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.