Karavali
ಉಡುಪಿ: 'ಖಾಕಿಗೆ ಗೌರವ ಇದೆ, ಖಾಕಿ ಕಾಂಗ್ರೆಸ್ ಆದರೆ ಪ್ರತಿಭಟಿಸುತ್ತೇವೆ'- ಸುನಿಲ್ ಕುಮಾರ್
- Mon, Nov 25 2024 08:32:21 PM
-
ಉಡುಪಿ, ನ.25(DaijiworldNews/AA): ಖಾಕಿ ಕಾಂಗ್ರೆಸ್ ಆಗಬಾರದು. ಖಾಕಿಗೆ ಗೌರವ ಇದೆ, ಆದರೆ ಖಾಕಿ ಕಾಂಗ್ರೆಸ್ ಆದರೆ ಪ್ರತಿಭಟಿಸುತ್ತೇವೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಾ.ಅರುಣ್ ಕುಮಾರ್ ಅವರ ವಿರುದ್ಧ ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಮೂಲಕ ನಮ್ಮನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ನಮ್ಮ ವಿಚಾರಕ್ಕೆ ದೊಡ್ಡ ಬೆಂಬಲ ಸಿಗುತ್ತಿದೆ. ಹಿಂದುತ್ವದ ವಿಚಾರ ತಡಿಗೆಯುವುದು ನಿಮ್ಮ ಭ್ರಮೆ. ನೂರಾರು ಕಾರ್ಯಕರ್ತರ ಮೇಲೆ ವಿನಾಕಾರಣ ಮೊಕ್ಕದ್ದಮೆ ಹಾಕಲಾಗಿದೆ. ನಮ್ಮ ಸಂಘಟನೆ ಕಾರ್ಯಕರ್ತರಿಂದ ಎಲ್ಲಿ ಅಶಾಂತಿ ನಿರ್ಮಾಣವಾಗಿದೆ. ಯಾವುದೇ ಘಟನೆ ಇಲ್ಲ, ಸಾರ್ವಜನಿಕರ ದೂರಿಲ್ಲ. ಇದು ಪೊಲೀಸ್ ಇಲಾಖೆಗೆ ನಾಚಿಕೆಗೇಡು ಸಂಗತಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹಿಂದೂ ಜಾಗರಣ, ಭಜರಂಗದಳ ಮೇಲೆ ಸುಮೋಟೋ ಕೇಸ್ ಹಾಕ್ತಾರೆ. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಕಲ್ಲು ತೋರಿದವರ ಕೇಸ್ ವಾಪಸ್ ತೆಗೆದುಕೊಳ್ಳುತ್ತಾರೆ. ಈ ಸರ್ಕಾರದ ಆದ್ಯತೆ ಏನು ಅನ್ನೋದು ಗೊತ್ತಾಗುತ್ತೆ. ನಮ್ಮ ಸಂಘಟನೆ ಎದುರಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ನೂರಾರು ಕೇಸು ಹಾಕಿಕೊಂಡು ನಮ್ಮ ಸಂಘಟನೆಗಳು ಬೆಳೆದಿದೆ. ಕೇಸು ಹಾಕಿದರೆ ನಾವು ಮನೆಯಲ್ಲಿ ಕುಳಿತುಕೊಳ್ಳುವ ಭ್ರಮೆ ಬೇಡ. ನಾವು ರಾಷ್ಟ್ರೀಯತೆಯನ್ನು ಆರಾಧಿಸುವವರು. ನಮ್ಮದು ಹಿಂದುತ್ವದ ಪ್ರಯೋಗಶಾಲೆ ಎಂಬ ಹೆಮ್ಮೆ ಇದೆ. ಹಿಂದುತ್ವದ ಪ್ರಯೋಗ ಶಾಲೆಯಲ್ಲಿ ನೆಮ್ಮದಿ ಇದೆ. ನಮ್ಮ ಕಾರ್ಯಕರ್ತರನ್ನು ಬಿಜೆಪಿ ಶಾಸಕರು ಬಿಟ್ಟು ಕೊಡುವುದಿಲ್ಲ. ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಉಡುಪಿಯಲ್ಲಿ ವಾಕ್ ಸ್ವಾತಂತ್ರ್ಯವೇ ಇಲ್ಲ ಎಂಬಂತಾಗಿದೆ
ಹಿಂದೂ ಕಾರ್ಯಕರ್ತರ ಮೇಲೆ ದೊಡ್ಡ ಪ್ರಮಾಣದಲ್ಲಿ ಕೇಸುಗಳನ್ನು ಹಾಕುತ್ತಿದ್ದಾರೆ. ಯಾವುದೇ ಸಾರ್ವಜನಿಕ ದೂರು ಇಲ್ಲದಿದ್ದರೂ ಸುಮೋಟೋ ಕೇಸ್ ಹಾಕಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪೋಲಿಸ್ ಇಲಾಖೆ ಕಾಂಗ್ರೆಸ್ ನ ಕೈಗೊಂಬೆಯಂತೆ ಕೆಲಸ ಮಾಡಬಾರದು. ಈ ಸರ್ಕಾರ ಮುಸಲ್ಮಾನರಿಗೆ ದೊಡ್ಡ ಬೆಂಬಲ ನೀಡುತ್ತಿದೆ. ಮುಸಲ್ಮಾನ ಸಂಘಟನೆಗಳು ಏನು ಮಾಡಿದರೂ ನಡೆಯುತ್ತೆ. ಹಿಂದೂ ಸಂಘಟನೆಗಳು ಮನವಿ ಕೊಟ್ಟರು ಎಫ್ಐಆರ್ ಹಾಕುತ್ತಾರೆ. ಉಡುಪಿಯಲ್ಲಿ ವಾಕ್ ಸ್ವಾತಂತ್ರ್ಯವೇ ಇಲ್ಲ ಎಂಬಂತಾಗಿದೆ. ಅಧಿವೇಶನದಲ್ಲೂ ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪ ಮಾಡುತ್ತೇವೆ. ಹತ್ತಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಮೇಲೆ ರಾಜ್ಯದಲ್ಲಿ ವಿನಾಕಾರಣ ಮುಖದ ಮೇಲೆ ದಾಖಲಾಗಿದೆ. ಖಾಕಿ ಕಾಂಗ್ರೆಸ್ನ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆಯನ್ನು ಮುಂದಿಟ್ಟುಕೊಂಡು ಹಿಂದೂಗಳನ್ನು ಹತ್ತಿಕ್ಕುವುದು ನಿಮ್ಮ ಭ್ರಮೆ. ಕೇಸುಗಳನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.ಉಪಚುನಾವಣೆಯಲ್ಲಿ ಯಾಕೆ ಹೇಗೆ ಹಿನ್ನಡೆ ಆಯ್ತು ಎಂಬ ಅವಲೋಕನ ಮಾಡ್ತೇವೆ
ಉಪಚುನಾವಣೆಗಳಲ್ಲಿ ಬಿಜೆಪಿ ಸೋಲನ್ನು ಕಂಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಕುರಿತು ಮಂಗಳವಾರ ರಾಜ್ಯಮಟ್ಟದ ಅವಲೋಕನ ಸಭೆ ಇದೆ. ರಾಜ್ಯ ಸರ್ಕಾರಗಳು ಅಧಿಕಾರದಲ್ಲಿರುವ ಪಕ್ಷಕ್ಕೆ ಅನುಕೂಲವಾಗುತ್ತೆ. ನಾವು ಶಿಗ್ಗಾವಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದೆವು. ಈ ವಿಚಾರದಲ್ಲಿ ಹಿನ್ನಡೆ ಆಗಿದೆ, ಇಲ್ಲ ಎನ್ನುವುದಿಲ್ಲ. ಯಾಕೆ ಹೇಗೆ ಹಿನ್ನಡೆ ಆಯ್ತು ಎಂಬ ಅವಲೋಕನ ಮಾಡುತ್ತೇವೆ. ಆಯಾ ವಿಧಾನಸಭಾ ಕ್ಷೇತ್ರ ಹಾಗೂ ರಾಜ್ಯ ಮಟ್ಟದಲ್ಲಿ ಅವಲೋಕನ ಮಾಡುತ್ತೇವೆ. ರಾಜ್ಯ ಮತ್ತು ದೇಶದಲ್ಲಿ ಆಳುವ ಸರ್ಕಾರಕ್ಕೆ ಉಪಚುನಾವಣೆ ಅನುಕೂಲ ವಾಗುವುದು ಸಹಜ. ರಾಜ್ಯದ ಜನ ಭ್ರಷ್ಟಾಚಾರ ಒಪ್ಪಿದ್ದಾರೆ ಎಂದು ಅರ್ಥವಲ್ಲ. ಸಿದ್ದರಾಮಯ್ಯನ ಹಗರಣವನ್ನು ರಾಜ್ಯದ ಜನ ಒಪ್ಪಿದ್ದಾರೆ ಎಂದು ಅರ್ಥವಲ್ಲ. ನಮ್ಮ ಹಗರಣಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಸಿಎಂ ಭಾವಿಸುವುದು ಬೇಡ. ಹಗರಣಗಳಿಗೆ ಜನ ಎನ್ಒಸಿ ಕೊಟ್ಟಿಲ್ಲ. ಈ ಎಲ್ಲ ವಿಚಾರ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ಹೇಳಿದರು.ನಮ್ಮೊಳಗಿನ ಅಭಿಪ್ರಾಯ ಬೇಧಗಳನ್ನು ಸರಿ ಮಾಡಿಕೊಳ್ಳುತ್ತೇವೆ
ಯತ್ನಾಳ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಂಗಳವಾರದ ಅವಲೋಕನ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುತ್ತೆ. ಡಿಸೆಂಬರ್ ಮೊದಲ ವಾರದಲ್ಲಿ ಕೇಂದ್ರ ನಾಯಕರು ಕರ್ನಾಟಕಕ್ಕೆ ಭೇಟಿ ನೀಡುತ್ತಾರೆ. ಖಂಡಿತವಾಗಿ ನಮ್ಮೊಳಗಿನ ಅಭಿಪ್ರಾಯ ಬೇಧಗಳನ್ನು ಸರಿ ಮಾಡಿಕೊಳ್ಳುತ್ತೇವೆ ಎಮದು ತಿಳಿಸಿದರು.ಗುಂಡಿಗೆ ಗುಂಡಿನ ಮುಖಾಂತರವೇ ಉತ್ತರ ಕೊಡಬೇಕು
ಹೆಬ್ರಿಯಲ್ಲಿ ನಡೆದಿರುವುದು ನಕಲಿ ಎನ್ಕೌಂಟರ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಡಿನ ಒಳಗೆ ಬಂದೂಕು ಇಟ್ಟುಕೊಂಡು ಕೆಲಸ ಮಾಡುವವರು ನಕ್ಸಲರು. ಇವರನ್ನು ಬೆಂಬಲಿಸಿ ಪ್ರತ್ಯಕ್ಷ ಪರೋಕ್ಷ ಸಹಕಾರ ಕೊಡುವ ನಗರ ನಕ್ಸಲರು ಇನ್ನೊಂದೆಡೆ ಇದ್ದಾರೆ. ನಗರ ನಕ್ಸಲರು ಇದು ನಕಲಿ ಎನ್ಕೌಂಟರ್, ತಪ್ಪು ಎನ್ನಬಹುದು. ಎಎನ್ಎಫ್ ಕಾರ್ಯವನ್ನು ನಾವು ಅಭಿನಂದಿಸುತ್ತೇವೆ. ಬಂದೂಕು ಹಿಡಿದುಕೊಂಡು ಕಾಡಿನ ಜನರನ್ನು ಬೆದರಿಸುವುದಕ್ಕೆ ಬಿಡಬಾರದು. ಗುಂಡಿಗೆ ಗುಂಡಿನ ಮುಖಾಂತರವೇ ಉತ್ತರ ಕೊಡಬೇಕು. ಶರಣಾಗತಿ ಮನವಿಗಳಿಗೆ ಪೊಲೀಸ್ ಇಲಾಖೆ ಆಸ್ಪದ ನೀಡಬಾರದು. ಇವರನ್ನು ಬೆಂಬಲಿಸಿ ಮಾತನಾಡುವವರು ನಗರ ನಕ್ಸಲರು. ಸರ್ಕಾರ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ಮೊಕದ್ದಮೆ ಹಾಕಬೇಕು ಎಂದರು.ಹಿಂದೂ ಜಾತ್ರೆಗಳಿಗೆ ಅನ್ಯ ಧರ್ಮೀಯರಿಗೆ ಅವಕಾಶ ಬೇಡ ಎಂಬ ಬಗ್ಗೆ ಮಾತನಾಡಿದ ಅವರು, ಹಿಂದೂ ದೇವಾಲಯಗಳು ಇರುವಲ್ಲಿ ಹಿಂದುಗಳಿಗೆ ವ್ಯಾಪಾರಕ್ಕೆ ಅವಕಾಶ. ಕಾನೂನಿನಲ್ಲೂ ಇದಕ್ಕೆ ಅವಕಾಶವಿದೆ. ಹಿಂದೆಯೂ ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆವು. ಮನೆಯ ಕೊಟ್ಟಿಗೆಗೆ ಬಂದು ದನ ಕಳ್ಳತನ ಮಾಡುವವರ ಬಗ್ಗೆ ಸರಕಾರಕ್ಕೆ ಮೃದು ಧೋರಣೆ ಇದೆ. ಪತ್ರಿಕಾ ಹೇಳಿಕೆ ನೀಡುವ ಕಾರ್ಯಕರ್ತರ ಮೇಲೆ ಕೇಸು ಹಾಕುತ್ತಾರೆ ಎಂದು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಶಾಸಕರಾದ ವಿ ಸುನಿಲ್ ಕುಮಾರ್, ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ ಗಂಟಿಹೊಳೆ, ಕಿರಣ್ ಕೊಡ್ಗಿ ಭಾಗಿಯಾಗಿದ್ದರು.