ಬಂಟ್ವಾಳ, ನ.26(DaijiworldNews/AA): ವಿಟ್ಲ-ಉಕ್ಕುಡ-ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ ಆಟೋರಿಕ್ಷಾ, ಟೂರಿಸ್ಟ್ ಕಾರು, ಖಾಸಗಿ ಬಸ್, ಲಾರಿ ಮಾಲಕರ ಸಂಘ ವಿಟ್ಲ ಇವರ ನೇತೃತ್ವದಲ್ಲಿ ವಿಟ್ಲದ ಕಾಶೀಮಠ ಬಳಿ ಇಂದು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದರು. ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕಾಗಮಿಸಿದ ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತಿಭಟನಾ ಕಾರರು ತಮ್ಮ ಅಳಲನ್ನು ತೋಡಿಕೊಂಡು ಕೋಡಲೇ ರಸ್ತೆ ಹೊಂಡವನ್ನು ಮುಚ್ಚುವಂತೆ ವಿನಂತಿಸಿದರು.
ಈ ವೇಳೆ ಅಧಿಕಾರಿಗಳು ಮಾತನಾಡಿ, ಕೆಲಸದ ಬಗೆಗಿನ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ. ಕೆಲವೇ ದಿನಗಳಲ್ಲಿ ಈ ಭಾಗದ ಡಾಮರೀಕರಣ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು. ಈ ವೇಳೆ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು 3 ದಿನದೊಳಗೆ ರಸ್ತೆ ಹೊಂಡವನ್ನು ಮುಚ್ಚದಿದ್ದಲ್ಲಿ ವಿಟ್ಲ 4 ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದರು. ಬಳಿಕ ಪ್ರತಿಭಟನಾ ಕಾರರನ್ನು ಸಮಾಧಾನ ಪಡಿಸಿದ ಅಧಿಕಾರಿಗಳು ಕೂಡಲೇ ಹೊಂಡಮುಚ್ಚುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟು, ಬಸ್ ಮಾಲಕರಾದ ಅರುಣ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿಪ್ರಕಾಶ್ ವಿಟ್ಲ, ಲಾರಿ ಮಾಲಕ ಚಾಲಕ ಸಂಘದ ಅಧ್ಯಕ್ಷರಾದ ರಮೇಶ್ ವರಪ್ಪಾದೆ, ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ವಸಂತ ಎನ್, ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಉದಯಕುಮಾರ್ ಆಲಂಗಾರು, ಪ್ರಮುಖರಾದ ಕೃಷ್ಣಯ್ಯ ವಿಟ್ಲ, ಬಿಜೆಪಿ ಪಕ್ಷದ ಪ್ರಮುಖರಾದ ಮೋಹನದಾಸ್ ಉಕ್ಕುಡ, ನರಸಪ್ಪ ಪೂಜಾರಿ, ಸದಾನಂದ ಗೌಡ ಸೇರಾಜೆ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್, ಜಯಂತ್, ವಸಂತ,ರಿಕ್ಷ ಮಾಲಕರಾದ ವೆಂಕಪ್ಪ ನಾಯ್ಕ್, ಬಾಸ್ಕರ, ಲಾರಿ ಮಾಲಕರಾದ ಜಯಪ್ರಕಾಶ್, ಹರೀಶ್ ಉಮಾಮಹೇಶ್ವರ, ನಾಗೇಶ್ ಬಸವನಗುಡಿ ಸೇರಿದಂತೆ ನೂರಾರು ನಾಗರಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.