Karavali
ಕಾರ್ಕಳ: ದಾಯ್ಜಿವರ್ಲ್ಡ್ ವರದಿಗೆ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ- ಅಹೋರಾತ್ರಿ ನಡೆಯಿತು ತೇಪೆ, ಅಭಿವೃದ್ಧಿ ಕಾಮಗಾರಿಗೆ ಸಿಗಬೇಕು ವೇಗ!
- Tue, Nov 26 2024 10:07:51 PM
-
ಕಾರ್ಕಳ, ನ.26(DaijiworldNews/AA): ಮಂಗಳೂರು-ಕಾರ್ಕಳ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-169 ಇದರ ಅಭಿವೃದ್ಧಿ ಕಾಮಗಾರಿಯಲ್ಲಿ ನಡೆದಿರುವ ಲೋಪದೋಷಗಳನ್ನು ಎಳೆಎಳೆಯಾಗಿ ದಾಯ್ಜಿವರ್ಲ್ಡ್ ವರದಿಗಳನ್ನು ಪ್ರಕಟಿಸುತ್ತಾ ಬಂದಿದೆ.
ಈ ನಡುವೆ ನವಂಬರ್ 25ರಂದು ಬೆಳಿಗ್ಗೆ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್ ಅವರೊಂದಿಗೆ ದಾಯ್ಜಿವರ್ಲ್ಡ್ ತಂಡವು ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಕಲೆಹಾಕಿತು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಸೂಪರ್ ವೈಸರ್ ಬಾಲಾಜಿ ಅವರನ್ನು ಸಂಪರ್ಕಿಸಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರೆದುಕೊಂಡಿರುವ ಬೃಹತ್ ಗಾತ್ರದ ಹೊಂಡಗಳನ್ನು ತ್ವರಿತಗತಿಯಲ್ಲಿ ಮುಚ್ಚುವ ಕಾಮಗಾರಿ ಕೈಗೊಳ್ಳಬೇಕೆಂದು ತಿಳಿಸಿದ್ದು, ಅದಕ್ಕೆ ಸಕರಾತ್ಮವಾಗಿ ಸ್ಪಂದಿಸುವ ಭರವಸೆಯನ್ನೂ ನೀಡಿದ್ದರು.
'ಮರಣಮೃದಂಗ ಬಾರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ!' ಎಂಬ ಶೀರ್ಷಿಕೆಯಡಿಯಲ್ಲಿ ಸಚಿತ್ರ ವರದಿಯನ್ನು ದಾಯ್ಜಿವರ್ಲ್ಡ್ ಪ್ರಕಟಿಸಿ ತನ್ನ ಜವಾಬ್ದಾರಿಯನ್ನು ಮೆರೆದಿತ್ತು. ಅದಕ್ಕೆ ಪೂರಕವಾಗಿ ಮಧ್ಯಾಹ್ನದ ವೇಳೆಗೆ ರಾಷ್ಟ್ರೀಯ ಹೆದ್ದಾರಿಯ ತೇಪೆ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಕಾರ್ಕಳದ ಬೈಪಾಸ್ ಸಮೀಪದಲ್ಲಿ ಶುರುಮಾಡಿ ಬೆಳುವಾಯಿಯಲ್ಲಿ ರಾತ್ರಿ ವರೆಗೂ ತೇಪೆ ಕಾಮಗಾರಿ ಮುಂದುವರಿದಿತ್ತು.
ಈ ಕುರಿತು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್ ಹೇಳಿಕೆಯೊಂದನ್ನು ಹೊರಡಿಸಿ, ಮಾಧ್ಯಮರಂಗವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸಮಾಜದ ಮುಂದೆ ತೆರೆದಿಡುವ ಕಾರ್ಯ ನಡೆಸಬೇಕು. ಅಂತಹ ಸತ್ಕಾರ್ಯವನ್ನು ದಾಯ್ಜಿವರ್ಲ್ಡ್ ಸುದ್ದಿಜಾಲದಲ್ಲಿ ಪ್ರಕಟಿಸುತ್ತಾ ಬಂದಿದೆ. ಪ್ರಖರವಾದ ಸುದ್ದಿಯು ಇಲಾಖಾಧಿಕಾರಿಯನ್ನು ಎಚ್ಚರಿಸುತ್ತದೆ ಎಂಬಂತೆ ಇದೀಗ ಕಾಮಗಾರಿ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.
ವರದಿಯಲ್ಲಿ ಏನಿತ್ತು?
ಮಂಗಳೂರು-ಕಾರ್ಕಳ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-169 ಇದರ ಅಭಿವೃದ್ಧಿ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದೆ. ಬೆಳುವಾಯಿ-ಕಾರ್ಕಳ ನಡುವೆ ಕೆಲವೆಡೆ ಬೇಕಾ ಬಿಟ್ಟಿಯಾಗಿ ಕಾಮಗಾರಿ ನಡೆಸಿರುವುದರಿಂದ ಹಲವು ಸಮಸ್ಯೆಗಳು ಸೃಷ್ಠಿಯಾಗಿದೆ. ಸುರಕ್ಷಿತ ನಿಯಾಮಾವಳಿ ಅನುಸರಿಸದೇ ಇರುದರಿಂದ ಅಪಾಯ ತಪ್ಪಿದಲ್ಲ.ಮರಣಮೃದಂಗ ಬಾರಿಸುತ್ತಿದೆ
ಬೆಳುವಾಯಿ-ಕಾರ್ಕಳ ನಡುವೆ ಕಾಮಗಾರಿ ಕೈಗೆತ್ತಿಕೊಂಡು ಎರಡು ವರ್ಷಗಳೇ ಸಂದಿದೆ. ಕೇವಲ 17 ಕಿ.ಮೀ ರಸ್ತೆ ನಿರ್ಮಾಣ ಇನ್ನೂ ಪೂರ್ತಿಯಾಗಿಲ್ಲ. ಆರಂಭದಿಂದ ಇಂದಿನ ವರೆಗೂ ನಾನಾ ಸಂಕಷ್ಟಗಳನ್ನು ವಾಹನ ಚಾಲಕರು, ನಾಗರಿಕರು ಅನುಭವಿಸುತ್ತಾ ಬಂದಿದ್ದಾರೆ. ಇನ್ನೂ ಆನೇಕ ಸಮಸ್ಯೆಗಳು ಎದುರಾಗಿದೆ. ರಸ್ತೆಯ ಕೆಲವೆಡೆಗಳಲ್ಲಿ ಮೃತ್ಯು ಕೂಪ ತಲೆ ಎತ್ತಿದ್ದರೂ, ಅದನ್ನು ಮುಚ್ಚುವ ಕಾರ್ಯ ಇನ್ನೂ ಮುಂದುವರಿಸಿಲ್ಲ.ಬೈಪಾಸ್ನಿಂದ ಸಾಣೂರು ಕಡೆಗೆ ಹೋಗುವ ಭಾಗದಲ್ಲಿ ಗ್ಯಾರೇಜ್ನ ಮುಂಭಾಗದಲ್ಲಿ ಬೃಹತ್ ಆಕಾರದ ಹೊಂಡವೇ ತಲೆ ಎತ್ತಿದೆ. ಪ್ರತಿದಿನ ದ್ವಿಚಕ್ರವಾಹನ ಸವಾರರು ಆಯ ತಪ್ಪಿ ಆ ಹೊಂಡಕ್ಕೆ ಬಿದ್ದು ಗಾಯಗೊಂಡವರು ಅನೇಕರು. ಪರಿಸರದ ನಾಗರಿಕರು ಹೊಂಡಕ್ಕೆ ಮಣ್ಣು ತುಂಬಿಸುವ ಕಾರ್ಯ ನಡೆಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೊಸ ರಸ್ತೆ ಹಾಗೂ ಹಳೆ ರಸ್ತೆಯ ಸಂಪರ್ಕ ಪ್ರದೇಶವಾಗಿರ ಆ ಭಾಗದಲ್ಲಿ ವಾಹನ ಸಂಚಾರದಲ್ಲಿ ಒಂದಿಷ್ಟು ಮಾರ್ಪಾಡು ಮಾಡಿರುವುದರಿಂದ ಅದರಲ್ಲೂ ಘನ ವಾಹನಗಳು ಏಕಾಏಕಿಯಾಗಿ ಬ್ರೇಕ್ ಹಾಕುತ್ತಿರುವುದರಿಂದ ರಸ್ತೆಯಲ್ಲಿ ಒತ್ತಡ ಉಂಟಾಗಿ ಆ ಭಾಗದ ಮಣ್ಣು ಕಿತ್ತು ಹೋಗುತ್ತಿದೆ.
ಸಾಣೂರು ಅವಿನಾಶ್ ಕಂಪೌಂಡ್ ಎದುರುಗಡೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿಗತಿ ಕೂಡಾ ಇದೇ ತರದಲ್ಲಿ ಇದೆ. ಜಲ್ಲಿಕಲ್ಲು ಮಿಶ್ರಣವೂ ಇಡೀ ರಸ್ತೆಯನ್ನೇ ಆವರಿಸಿಕೊಂಡಿದೆ. ಮತ್ತೊಂದೆಡೆಯಲ್ಲಿ ಭಾರೀ ಗಾತ್ರದ ಹೊಂಡಗಳು ತಲೆ ಎತ್ತಿದೆ. ಎದುರು ಬದುರಿನಿಂದ ಬರುವ ವಾಹನಗಳು ಹೊಂಡ ತಪ್ಪಿಸುವ ನಿಟ್ಟಿನಲ್ಲಿ ತಮ್ಮ ಪ್ರಯಾಣದ ದಿಕ್ಕುಗಳನ್ನೇ ತಪ್ಪಿ ಸಂಚರಿಸುತ್ತಿರುತ್ತದೆ. ಲಘುವಾಹನಗಳು ಈ ಪ್ರದೇಶವನ್ನು ಹಾದು ಹೋಗಲು ಪ್ರಯಾಸ ಪಡಬೇಕಾದ ಪ್ರಮೇಯಗಳು ಉಂಟಾದರೆ, ಘನ ವಾಹನಗಳು ಸಾಮಾಥ್ಯಕ್ಕೆ ಅನುಗುಣವಾಗಿ ನಾಗಲೋಟದಲ್ಲಿ ಮುನ್ನುಗುತ್ತಿರುವುದು ಕಂಡು ಬರುತ್ತಿದೆ.
ಕಾಂಕ್ರೀಟ್ ಮಿತ್ರಿಣದೊಂದಿಗೆ ಹೊಂಡ ಮುಚ್ಚುವ ಕಾಮಗಾರಿ ನಡೆಸಬೇಕಾಗಿದೆ. ಅದರೊಂದಿಗೆ ಡಾಂಬರು ಹಾಕುವ ಕಾಮಗಾರಿ ನಡೆಸಲೇ ಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ನಿಗಾ ವಹಿಸದೇ ಹೋದಲ್ಲಿ ಜೀವಕ್ಕೂ ಕುತ್ತು ಬರುವ ಸಾಧ್ಯತೆಗಳು ಕಂಡುಬರುತ್ತಿದೆ.
ಕೂಡು ರಸ್ತೆಗಳಿಗೆ ಮುಕ್ತಿ ದೊರೆತ್ತಿಲ್ಲ
ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯೊಂದರಲ್ಲಿ ರಾಷ್ಟ್ರೀಯ ಹೆದ್ದಾರಿ-169 ರ ಆಸುಪಾಸಿನಲ್ಲಿ 12 ಕೂಡು ರಸ್ತೆ ಇದೆ. ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯ ಕಾಮಗಾರಿ ಆರಂಭಿಸಿದ ಸಂದರ್ಭದಲ್ಲಿ ಕೆಲವು ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಏರಿಸಿರುವುದು ಕೆಲವು ಭಾಗಗಳಲ್ಲಿ ತಗ್ಗಿಸಲಾಗಿಗತ್ತು. ಇದರಿಂದ ಕೂಡು ರಸ್ತೆ ಸಂರ್ಪಕದ ಭಾಗದಲ್ಲಿ ಸಮಸ್ಸೆ ಎದುರಾಗಿದೆ. ಕೂಡು ರಸ್ತೆಯ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಜಲ್ಲಿಕಲ್ಲು ಮಿಶ್ರಣ ಹಾಕಿರುವುದರಿಂದ ಪರಿಣಾಮವಾಗಿ ಪ್ರಸಕ್ತ ದಿನದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅರ್ಧ ಭಾಗದಷ್ಟು ಆ ಜಲ್ಲಿಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಕೊಂಡಿವೆ. ವಾಹನಗಳು ಇದೇ ಭಾಗದಲ್ಲಿ ಪೈಪೋಟಿಯಾಗಿ ಸಂಚರಿಸಿದರೆ ಅಪಾಯ ಕಾದಿಟ್ಟ ಬುತ್ತಿಯಾಗಲಿದೆ.ಜಲ್ಲಿಕಲ್ಲು ತೆರವು ಮಾಡಿದ ಅಧ್ಯಕ್ಷ!
ಸಾಣೂರು ಮುದ್ದಣ್ಣ ನಗರದಿಂದ ರಾಷ್ಟ್ರೀಯ ಹೆದ್ದಾರಿ ಕೂಡು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದ ದೊಡ್ಡ ಜಲ್ಲಿಯನ್ನು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್ ಅವರು ಖುದ್ದಾಗಿ ಕಾಲಿನಿಂದ ಬದಿಗೆ ಸರಿಸುತ್ತಿದ್ದ ದೃಶ್ಯ ಕ್ಯಾಮರಾಕ್ಕೆ ಸೆರೆಯಾಗಿತ್ತು. ಈ ಬಗ್ಗೆ ಮಾತನಾಡಿದ ಅವರು, ಮಂಗಳೂರು ಬಿಕರ್ನಕಟ್ಟೆ-ಕಾರ್ಕಳ ಬೈಪಾಸ್ನ ತನಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಬೃಹತ್ ಕಾಮಗಾರಿ ಆರಂಭಗೊಂಡು ಎರಡು ವರ್ಷ ಸಂದತ್ತಾ ಬಂದಿದೆ. ನಾಗರಿಕರು ನಾನಾ ಸಮಸ್ಸೆಗಳನ್ನು ಎದುರಿಸುತ್ತಾ ಬಂದಿದ್ದು, ಹಲವು ಬಾರೀ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಕಾಮಾಗಾರಿ ವೀಕ್ಷಣೆ ಮಾಡಿದೆ. ಅಗತ್ಯ ಕಾಮಗಾರಿ ನಡೆಸುವಂತೆ ನಿರ್ದೇಶನ ನೀಡಿದೆ. ಆದರೆ ಇದುವರೆಗೆ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲ. ಅಷ್ಟೊಂದು ದೊಡ್ಡ ಕಾಮಗಾರಿಗೆ ಬೆರೆಳೆಣಿಯಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ ಎಂದು ಹೇಳಿದರು.ಬೈಪಾಸ್ ಹಾಗೂ ಅವಿನಾಶ್ ಕಂಪೌಂಡ್ ಎದುರಿನ ರಸ್ತೆಯಲ್ಲಿ ಬೃಹತ್ ಆಕಾರದ ಹೊಂಡ ತೆರದುಕೊಂಡಿದೆ. ಅದನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿಲ್ಲ. ಕೂಡು ರಸ್ತೆಗೆ ಇನ್ನೂ ಡಾಂಬರೀಕೆರಣ ಮಾಡಿಲ್ಲ. ಕೂಡು ರಸ್ತೆಯ ಹಾಕಲಾಗಿದ್ದ ಜಲ್ಲಿಕಲ್ಲುಗಳು ರಾಷ್ಟ್ರೀಯ ಹೆದ್ದಾರಿಯ ಅರ್ಧ ಭಾಗದಷ್ಟು ಚೆದುರಿಕೊಂಡಿದೆ. ಗ್ರಾಮ ಪಂಚಾಯತ್ ಅಧ್ಯಕ್ಷನ ನೆಲೆಯಲ್ಲಿ ಈ ಬಗ್ಗೆ ಪೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಕವಡೆಕಾಸನ ಬೆಲೆ ನೀಡುತ್ತಿಲ್ಲ. ಕಾರ್ಮಿಕರಲ್ಲಿ ಮಾತನಾಡಲು ಹೋದರೆ ಸೂಪರ್ವೈಸರ್ ಬಾಲಾಜಿಯವರ ಸೂಚನೆ ಬೇಕು ಎನ್ನುತ್ತಿದ್ದಾರೆ. ಮತ್ತೊಮ್ಮೆ ಗ್ರಾಮಸ್ಥರು ಬೀದಿಗೆ ಇಳಿಯಬೇಕಾದ ದಿನಗಳು ಎದುರಾಗಿದೆ ಎಂದರು.
ಬೈಪಾಸ್ ನಿಂದ ಸಾಣೂರು ಕಡೆಗೆ ಹೋಗುವಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣಗೊಂಡಿದೆ. ಇದೇ ರಸ್ತೆಯಾಗಿ ಬರುವ ವಾಹನಗಳ ಚಾಲಕರಿಗೆ ಹಾಗೂ ಸವಾರರಿಗೆ ಹೊಂಡದ ಅರಿವು ಗಮನಕ್ಕೆ ಬಾರದೇ ಕೆಲವೊಮ್ಮ ಅಪಘಾತಕ್ಕೀಡಾದ ಪ್ರಸಂಗ ಪ್ರತಿದಿನ ನಡೆಯುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಓಡಿಬಂದು ಗಾಯಾಳುಗಳಿಗೆ ಉಪಚರಿಸುತ್ತೇನೆ. ಇಲಾಖೆ ಎಚ್ಚೆತ್ತುಕೊಂಡು ಹೊಂಡ ಮುಚ್ಚುವ ಕಾರ್ಯ ಮಾಡಲೇ ಬೇಕು ಎಂದು ಗ್ಯಾರೇಜ್ ಮಾಲಕ ಅಬ್ದುಲ್ ಅವರು ಒತ್ತಾಯಿಸಿದ್ದಾರೆ.