ಕಾರ್ಕಳ, ನ.27(DaijiworldNews/AA): ಕಾರ್ಕಳ ಪುರಸಭಾ ವ್ಯಾಪ್ತಿಗೆ ಸಮಗ್ರವಾಗಿ ಸರಬರಾಜು ಆಗುತ್ತಿದ್ದ ರಾಮಸಮುದ್ರದ ನೀರು ಕಲುಷಿತಗೊಂಡಿದೆ. ನೀರಿನ ಮೇಲ್ಭಾಗದಲ್ಲಿ ತೈಲದ ಅಂಶ ತೇಲುತ್ತಿದ್ದು, ಕುಡಿಯುವುದಕ್ಕೆ ಅಯೋಗ್ಯ ಎನ್ನಿಸಿದೆ. ಗಂಭೀರವಾಗಿ ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವಿಚಾರವು ವಿಷಯಾಂತಗೊಳಿಸಬಾರು. ಸರ್ವ ಸದಸ್ಯರು ಇದರ ಬಗ್ಗೆ ಗಮನಹರಿಸಬೇಕೆಂದು ಕೌನ್ಸಿಲರ್ ಶುಭದರಾವ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕಾರ್ಕಳದಲ್ಲಿ ದೀಪೋತ್ಸವ ಸಂದರ್ಭದಲ್ಲಿ ರಾಮಸಮುದ್ರದ ಕಲುಷಿತ ನೀರನ್ನು ಕಂಡ ಭಕ್ತರ ಮನಸ್ಸಿಗೂ ನೋವು ಉಂಟು ಮಾಡಿದೆ. ಅಡುಗೆ ತ್ಯಾಜ್ಯ, ಶೌಚಾಲಯದ ತ್ಯಾಜ್ಯ ನೀರು ರಾಮಸಮುದ್ರದಲ್ಲಿ ಕಲುಷಿತಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಈ ವಿಚಾರ ಸಮಸ್ಸೆಯಾಗಿ ಮಾರ್ಪಡುತ್ತದೆ ಎಂದು ಮನ್ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಪುರಸಭೆ ಮತ್ತಿಬ್ಬರು ಕೌನ್ಸಿಲರ್ ಗಳಾದ ವಿನ್ನಿ ಬೋಲ್ಡ್ ಮೆಡೋನ್ಸಾ, ಹರೀಶ್ ದೇವಾಡಿಗ ಧ್ವನಿಗೂಡಿಸ ಮಾತನಾಡಿ, ರಾಮಸಮುದ್ರ ಬಳಿಯಲ್ಲಿ ಇರುವ ಎಎನ್ಎಫ್ ಕ್ಯಾಂಪ್ ಶೌಚಾಲಯದ ತ್ಯಾಜ್ಯ ನೀರು ರಾಮಸಮುದ್ರಕ್ಕೆ ಹರಿಯ ಬಿಡಲಾಗುತ್ತಿರುವ ವಿಚಾರವನ್ನು ಸಭೆಯ ಮುಂದಿಟ್ಟರು.
ಹಿರಿಯ ಸದಸ್ಯ ಅಶ್ಫಕ್ ಅಹಮ್ಮದ್ ಮಾತನಾಡಿ, ನಗರದ ಪ್ರದೇಶದಲ್ಲಿ ಅಮೃತಯೋಜನೆಯಡಿಯಲ್ಲಿ ರೂ.60 ಕೋಟಿ ಅನುದಾನವನ್ನು ವಿನಿಯೋಗಿಸಲಾಗಿದೆ. ಅದಕ್ಕಾಗಿ ಪೈಪ್ ಲೈನ್ ಅಳವಡಿಸಲಾಗುತ್ತಿದೆ. ಕುಡಿಯುವ ನೀರಿನ ಮೂಲ ಯಾವುದೆಂದು ಇನ್ನೂ ತಿಳಿದಿಲ್ಲ. ಬೇಸಿಗೆ ಕಾಲ ಎದುರಾಗುವ ದಿನಗಳಲ್ಲಿ ಪುರಸಭೆ ವ್ಯಾಪ್ತಿಗೆ ರಾಮಸಮುದ್ರ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಬಂಗ್ಲೆಗುಡ್ಡೆ, ಕಜೆ ಪ್ರದೇಶಗಳಲ್ಲಿ ಬಾವಿಗಳು ವಿರಳವಾಗಿದ್ದು, ಬಹುತೇಕ ಮನೆಮಂದಿಯರು ರಾಮಸಮುದ್ರದ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ. ಅವರು ಯಾವ ರೀತಿಯಲ್ಲಿ ರಾಮಸಮುದ್ರದ ನೀರನ್ನು ಕುಡಿಯಬೇಕೆಂಬುದು ಗಮನಾರ್ಹ ವಿಚಾರ ಎಂದರು.
ಅದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ರಾಮಸಮುದ್ರ ನೀರು ಕಲುಷಿತಕ್ಕೆ ಕಾರಣವಾಗಿರುವ ಸಂಘ-ಸಂಸ್ಥೆಗಳು ಹಾಗೂ ಎಎನ್ಎಫ್ ಗೆ ನೋಟಿಸ್ ಜಾರಿಗೊಳಿಸಿದ್ದೇವೆ. ಅದನ್ನು ಜಿಲ್ಲಾಡಳಿತಕ್ಕೆ ಪತ್ರ ವ್ಯವಹಾರ ಮೂಲಕ ತಿಳಿಸಿದ್ದೇವೆ ಎಂದು ಹೇಳಿದರು.