ಮಂಗಳೂರು, ನ.28(DaijiworldNews/TA):ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ. ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಅನುಷ್ಟಾನ ಮಾಡಲಾಗಿದ್ದು, ಜನಪರ ಕೆಲಸ ಮಾಡಿದೆ ಎಂಬ ನಂಬಿಕೆ ಜನತೆಗೆ ಬಂದಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯು ಇಲ್ಲಸಲ್ಲದ ಅಪಪ್ರಚಾರ ಮಾಡಿತ್ತು. ಸದ್ಯ ಯೋಜನೆಗಳನ್ನು ಸರಿಯಾಗಿ ಅನುಷ್ಟಾನ ಮಾಡಿರುವ ಹಿನ್ನೆಲೆಯಲ್ಲಿ ಜನರಿಗೆ ನಂಬಿಕೆ ಬಂದಿದ್ದು, ರಾಜ್ಯದಲ್ಲಿ ಗೆಲ್ಲಲಾಗದ ಕ್ಷೇತ್ರವನ್ನೂ ಕೂಡ ಇದೀಗ ಕಾಂಗ್ರೆಸ್ ಗೆದ್ದುಕೊಂಡಿದೆ. ಜನತೆಯ ನಮ್ಮ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಎರಡು ಕಡೆಗಳಲ್ಲಿ ಮಾಜಿ ಸಿಎಂಗಳ ಪುತ್ರರೇ ಸೋಲುಂಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮುಖ್ಯ ಫಲಾನುಭವಿಗಳು ಮಹಿಳೆಯರಾಗಿದ್ದು, ಅವರು ಯೋಜನೆ ಮೆಚ್ಚಿ ಕಾಂಗ್ರೆಸ್ ಗೆ ಮತ ಚಲಾಯಿಸಿದ್ದಾರೆ.
ಇತ್ತ ದಕ್ಷಿಣ ಕನ್ನಡದ 30 ಗ್ರಾಪಂ ಕ್ಷೇತ್ರಗಳು ಮತ್ತು ಪುರಸಭೆಯ 1 ಕ್ಷೇತ್ರ ಸೇರಿ ಒಟ್ಟು 31 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ 24 ಕ್ಷೇತ್ರಗಳನ್ನು ಜಯಿಸಿದೆ. ಉಪಚುನಾವಣೆಯ ಮೊದಲು 31 ಕ್ಷೇತ್ರಗಳ ಪೈಕಿ 14 ರಲ್ಲಿ ಕಾಂಗ್ರೆಸ್ ಬೆಂಬಲದಿಂದ ಜಯಿಸಿದ ಸದಸ್ಯರು ಇದ್ದರೆ, ಬಿಜೆಪಿ ಸಂಖ್ಯೆ 17 ಇತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿ 10 ನ್ನು ಕಳೆದುಕೊಂಡು 7ರಲ್ಲಿ ಜಯ ಗಳಿಸಿದೆ ಎಂದು ಅವರು ತಿಳಿಸಿದರು.