ಬಂಟ್ವಾಳ,ನ.28(DaijiworldNews/TA): ಬಾಳೆಪುಣಿ ಗ್ರಾ.ಪಂ.ಗೆ ಒಳಪಟ್ಟ ಪ್ರದೇಶದ ಮುಡಿಪು ಪೇಟೆಯ ಮುಖ್ಯ ರಸ್ತೆಗೆ ತಾಗಿಕೊಂಡು ಕುರ್ನಾಡು ಗ್ರಾ. ಪಂ. ನ ತ್ಯಾಜ್ಯ ವಿಲೇವಾರಿ ಘಟಕವು ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಸಾರ್ವಜನಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಈ ಕೂಡಲೇ ಬಾಳೆಪುಣಿ ಹಾಗೂ ಕುರ್ನಾಡು ಪಂಚಾಯತ್ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಈ ತ್ಯಾಜ್ಯ ವಿಲೇವಾರಿ ಘಟಕವನ್ನು ತೆರವುಗೊಳಿಸಬೇಕಂದು ಡಿವೈಎಫ್ ಐ ಮುಡಿಪು ಘಟಕ ವತಿಯಿಂದ ಮನವಿ ನೀಡಲಾಯಿತು.
ಹತ್ತಿರದಲ್ಲೇ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೂಡ ಇದ್ದು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮೂಕ ಪ್ರಾಣಿಗಳು ತ್ಯಾಜ್ಯ ವಿಲೇವಾರಿ ಘಟಕದ ಕೊಳೆತ ತ್ಯಾಜ್ಯಗಳನ್ನು ಹೊರ ತಂದು ರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದು, ರೋಗ ರುಜಿನಗಳು ಹರಡುತ್ತಿವೆ. ಈ ಮೊದಲು ಡಿವೈಎಫ್ಐ ಮುಡಿಪು ಘಟಕ ವತಿಯಿಂದ ತ್ಯಾಜ್ಯ ವಿಲೇವಾರಿ ಘಟಕವನ್ನು ತೆರವುಗೊಳಿಸಲು ಕುರ್ನಾಡು ಗ್ರಾ.ಪಂ. ಗೆ ಮನವಿ ಮಾಡಿತ್ತು ಆದರೆ ಪಂಚಾಯತ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರು ಈ ತ್ಯಾಜ್ಯ ಘಟಕದಿಂದ ಬೇಸತ್ತಿದ್ದು ಈ ಕೂಡಲೇ ಪಂಚಾಯತ್ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ತ್ಯಾಜ್ಯ ವಿಲೇವಾರಿ ಘಟಕವನ್ನು ತೆರವುಗೊಳಿಸಬೇಕಂದು ಆಗ್ರಹಿಸಲಾಯಿತು.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕುರ್ನಾಡು ಮತ್ತು ಬಾಳೆಪುಣಿ ಗ್ರಾಮ ಪಂಚಾಯತ್ ಮುಂಭಾಗ ಡಿವೈಎಫ್ಐ ನೇತೃತ್ವದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಯಿತು. ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ,ಉಪಾಧ್ಯಕ್ಷ ರಝಾಕ್ ಮುಡಿಪು, ಮುಖಂಡರಾದ ರಝಾಕ್ ಮೊಂಟೆಪದವು ಮೊದಲಾದವರು ಉಪಸ್ಥಿತರಿದ್ದರು.