ಬಂಟ್ವಾಳ,ನ.28(DaijiworldNews/TA): ಪುರಸಭೆಯಲ್ಲಿ ಸರಕಾರದ ಪಂಚಗ್ಯಾರಂಟಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಿಬಿರ ಆಯೋಜಿಸಲಾಗಿದ್ದು, ಇದಕ್ಕೆ ಪುರಸಭಾ ಸಭಾಂಗಣದಲ್ಲಿ ಚಾಲನೆ ನೀಡಲಾಗಿದೆ.
ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಬಂಟ್ವಾಳ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಸರಕಾರದ ಪಂಚ ಗ್ಯಾರಂಟಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವರು ಯೋಜನೆಯಿಂದ ಹೊರಗುಳಿದಿದ್ದು, ಇದರ ಕುರಿತು ಸಮರ್ಪಕ ಮಾಹಿತಿ ನೀಡುವ ಸಲುವಾಗಿ ತಾಲೂಕಿನಾದ್ಯಂತ ಶಿಬಿರಗಳನ್ನು ಆಯೋಜಿಸಲಾಗಿದೆ.
ಅದರಂತೆ ಬಂಟ್ವಾಳ ಪುರಸಭೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಮಣಿನಾಲ್ಕೂರು ಗ್ರಾಪಂನಲ್ಲಿ ನಡೆದ ಶಿಬಿರದಿಂದ ಆ ವ್ಯಾಪ್ತಿಗೆ ಒಳಪಟ್ಟ ಜನತೆ ಶಿಬಿರದಿಂದ ಪ್ರಯೋಜನ ಪಡೆದಿದ್ದಾರೆ. ಸರಕಾರದ ಗ್ಯಾರಂಟಿಗಳು ಅರ್ಹರಿಗೆ ತಲುಪುವಂತೆ ಮಾಡುವುದೇ ಶಿಬಿರದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ, ಸರಕಾರದ ಯೋಜನೆಗಳು ಅರ್ಹರಿಗೆ ದೊರಕಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರ ಪ್ರಯೋಜನ ಎಲ್ಲರಿಗೂ ಸಿಗಲಿ ಎಂದು ಹಾರೈಸಿದರು. ಈ ಸಂದರ್ಭ ಪುರಸಭಾ ಉಪಾಧ್ಯಕ್ಷ ಮೊನೀಶ್ ಆಲಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ ನಾಯ್ಕ್, ಮೂಲ್ಕಿ ಅಧ್ಯಕ್ಷ ಆಲ್ವಿನ್ ಕುಟಿನ್ಹೊ, ಗ್ಯಾರಂಟಿ ಸಮಿತಿ ಸದಸ್ಯರಾದ ಐಡಾ ಸುರೇಶ್, ಪುರಸಭೆಯ ಕಾಂಗ್ರೆಸ್ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.