ಮಂಗಳೂರು, ನ.28(DaijiworldNews/AK):ಎರಡು ಶಾಲೆಗಳಿಗೆ ನುಗ್ಗಿದ ಕಳ್ಳರು ಕಚೇರಿಯನ್ನೆಲ್ಲಾ ತಡಕಾಡಿದ್ದು,ನಗದು ದೋಚಿ ಪರಾರಿಯಾಗಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆ ಕಾರ್, ಕೊಲ್ಯ ದಲ್ಲಿ ನಡೆದಿದ್ದು,ಈ ಪ್ರಕರಣವು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
https://daijiworld.ap-south-1.linodeobjects.com/Linode/images3/rayan_281124_Crime8.jpg
ಕೊಲ್ಯದ ಸಂತ ಜೋಸೆಫರ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಕನ್ನಡ ಮಾಧ್ಯಮ ಶಾಲೆಗಳಿಗೆ ಕಳ್ಳರು ಕನ್ನ ಹಾಕಿದ್ದು ,ಸಿಸಿಟಿವಿ ಕ್ಯಾಮೆರಾವನ್ನು ತಿರುಚಿ ಬೀಗ ಒಡೆದು ಒಳ ನುಗ್ಗಿ ಜಾಲಾಡಿದ್ದಾರೆ.
ಕೊಲ್ಯ ಜಾಯ್ ಲ್ಯಾಂಡ್ ಶಾಲೆಗೆ ಮೂರನೇ ಬಾರಿ ಕಳ್ಳರು ಕನ್ನ ಹಾಕಿದ್ದಾರೆ.ಈ ಹಿಂದೆಯೂ ಎರಡು ಬಾರಿ ಶಾಲೆಗೆ ಕಳ್ಳರು ನುಗ್ಗಿದ್ದು ನಗದು ಕಳವುಗೈದಿದ್ದರು.ಈ ಬಾರಿ ಸಿಸಿಟಿವಿ ಕ್ಯಾಮೆರ ತಿರುಚಿ ಒಳ ನುಗ್ಗಿದ ಕಳ್ಳರು ಪ್ರಾಂಶುಪಾಲರ ಕಚೇರಿ,ಕಬಾಟುಗಳ ಬೀಗ ಒಡೆದು ಹುಡುಕಾಟ ನಡೆಸಿದ್ದು, ವಿದ್ಯಾರ್ಥಿಗಳಿಂದ ಪಿಕ್ನಿಕ್ ಗಾಗಿ ಸಂಗ್ರಹಿಸಿದ್ದ ಸುಮಾರು 26,000 ರೂಪಾಯಿ ನಗದನ್ನ ಎಗರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಶಾಲೆಗೂ ಬುಧವಾರ ಮುಂಜಾನೆ 4.30 ಗಂಟೆ ವೇಳೆಗೆ ಕನ್ನ ಹಾಕಿದ ಕಳ್ಳನೋರ್ವನು ಸಿಸಿಟಿವಿ ಕ್ಯಾಮರಕ್ಕೆ ಮುಖ ಕಾಣದಿರಲು ಮ್ಯಾಟನ್ನು ಅಡ್ಡ ಹಿಡಿದು ಮುನ್ನುಗ್ಗುತ್ತಿರುವ ದೃಶ್ಯವು ಸಿಸಿಟಿವಿ ಯಲ್ಲಿ ದಾಖಲಾಗಿದೆ.
ಸಿಸಿಟಿವಿ ಕ್ಯಾಮರ ತಿರುಚಿ ಕಚೇರಿ ,ಸ್ಟಾಪ್ ರೂಂನ ಕಪಾಟುಗಳನ್ನು ಒಡೆದು ತಡಕಾಡಿ ನಗದು ದೋಚಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಎರಡೂ ಶಾಲೆಗಳಲ್ಲೂ ಏಕಕಾಲದಲ್ಲಿ ಕಳ್ಳತನ ನಡೆದಿದ್ದು, ಓರ್ವನೇ ಕಳ್ಳ ಕೈಚಳಕ ತೋರಿದ್ದಾನೋ ಅಥವ ತಂಡ ಶಾಮೀಲಾಗಿದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.