ಉಳ್ಳಾಲ, ನ.29(DaijiworldNews/AA): ನಾನು ಮಾಡುವ ಯಾವುದೇ ಅಭಿವೃದ್ಧಿ ಕೆಲಸ ಓಟಿಗಾಗಿ ಅಲ್ಲ, ಮುಂದಿನ ತಲೆಮಾರಿಗಾಗಿ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಯ ವಿಚಾರ ಬಂದಾಗ ಯಾವುದೇ ರಾಜಿಯಿಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ತೊಕ್ಕೊಟ್ಟಿನಿಂದ ಚೆಂಬುಗುಡ್ಡೆವರೆಗೆ ಹಾಗೂ ಅಸೈಗೋಳಿಯಿಂದ ನಡುಪದವು ತನಕ ನಿರ್ಮಾಣ ಆಗಲಿರುವ ಚತುಷ್ಪಥ ರಸ್ತೆ ಕಾಮಗಾರಿಗೆ ತೊಕ್ಕೊಟ್ಟಿನಲ್ಲಿ ಶಂಕು ಸ್ಥಾಪನಾ ಕಾರ್ಯಕ್ರಮ ನಡೆಯಿತು. ಈ ಚತುಷ್ಪಥ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಷ್ಟು ವರ್ಷ ಯಾವುದೇ ವ್ಯಾಪಾರಿಗಳಿಗೆ ತೊಂದರೆ ನೀಡಿಲ್ಲ, ಅಂಗಡಿ ಎದುರು ಶೀಟ್ ಎಷ್ಟು ಮುಂದಕ್ಕೆ ಹಾಕಿದರೂ ಅಡ್ಡಿಪಡಿಸಿಲ್ಲ. ಆದರೆ ರಸ್ತೆ ಅಭಿವೃದ್ಧಿ ಆಗುವಾಗ ವ್ಯಾಪಾರಿಗಳ ಸಹಕಾರ ಅಗತ್ಯ, ರಸ್ತೆ ನಿರ್ಮಾಣ ಬಳಿಕ ದುಡಿಯುವ ವರ್ಗ ರಿಕ್ಷಾ ಚಾಲಕರ ಹಿತದೃಷ್ಟಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಉಳ್ಳಾಲ ಸ್ಮಾರ್ಟ್ ಮಾಡುವ ನಿಟ್ಟಿನಲ್ಲಿ ವಿದ್ಯುತ್ ತಂತಿಗಳನ್ನು ಮಣ್ಣಿನಡಿ ಹಾಕುವ ವ್ಯವಸ್ಥೆಗೆ 220 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. 24 ಗಂಟೆ ಕುಡಿಯುವ ನೀರು, ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ 80ರಿಂದ 100 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ನಗರಸಭೆಯ ಅಧ್ಯಕ್ಷೆ ಶಶಿಕಲಾ ಚೆಂಬುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.