ಮಂಗಳೂರು, ನ.29(DaijiworldNews/AA): ಹಲವಾರು ವರ್ಷಗಳ ಇತಿಹಾಸವುಳ್ಳ ಮಂಗಳೂರು ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡದ ಆವರಣದಲ್ಲಿ ನವೆಂಬರ್ 30 ಮತ್ತು ಡಿಸೆಂಬರ್ 1ರಂದು ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನ.30ರಂದು ಬೆಳಗ್ಗೆ 10ರಿಂದ ಸರಕಾರಿ ಶಾಲೆಗಳ 3ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ಆಯಾಯ ಪಾರಂಪರಿಕ ಸ್ಮಾರಕಗಳನ್ನು ಈ 5 ಸ್ಪರ್ಧೆಯಲ್ಲಿ ಅಭಿವ್ಯಕ್ತಗೊಳಿಸಬಹುದು. ಅಂದು ಅಪರಾಹ್ನ 2ರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಳೇ ಜಿಲ್ಲಾಧಿಕಾರಿ ಕಟ್ಟಡದ ಒಳ ಮತ್ತು ಹೊರ ಭಾಗದ ಆವರಣದ ಬಗ್ಗೆ ತಮ್ಮ ದೃಷ್ಟಿಕೋನದ ಬಗ್ಗೆ ಕಲಾವಿನ್ಯಾಸದ ಸ್ಪರ್ಧೆ ನಡೆಯಲಿದೆ. ಈ ಕಟ್ಟಡವನ್ನು ಇನ್ನಷ್ಟು ಆಕರ್ಷಿಸಲು ನವೀನ ವಿನ್ಯಾಸವನ್ನು ಸ್ಪರ್ಧಾಳುಗಳು ತಮ್ಮ ಕಲೆಯಲ್ಲಿ ಪ್ರದರ್ಶಿಸಬಹುದಾಗಿದೆ ಎಂದರು.
ಇನ್ನು ಡಿಸೆಂಬರ್ 1ರಂದು ಪೂರ್ವಾಹ್ನ 11ರಿಂದ 12 ಹಾಗೂ ಅಪರಾಹ್ನ 3ರಿಂದ 4ರವರೆಗೆ ಪಾರಂಪರಿಕ ನಡಿಗೆ, ಸಂಜೆ 4:30ರಿಂದ ಮುಕ್ತ ಸಂವಾದ ನಂತರ ಬಹುಮಾನ ವಿತರಣೆ, ಸಂಜೆ 6ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಎರಡು ದಿನಗಳ ಕಾಲ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಪಾರಂಪರಿಕ ವಸ್ತು ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.