ಉಡುಪಿ,,ನ.29(DaijiworldNews/AK): ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ನ.29ರಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವು ಈ ವರ್ಷದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಸಂಘವು ಸ್ವೀಕರಿಸಿದ ಸಂಭ್ರಮವನ್ನು ಕೇಕ್ ಕತ್ತರಿಸುವ ಸಮಾರಂಭದೊಂದಿಗೆ ಗುರುತಿಸಿತು. ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ಪ್ರಭಾಕರ ಆಚಾರ್ಯ ಚಿತ್ತೂರು ಹಾಗೂ ಇತ್ತೀಚೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ಹಿರಿಯ ಪತ್ರಕರ್ತ ಯು.ಎಸ್.ಶೆಣೈ ಅವರನ್ನು ಸನ್ಮಾನಿಸಲಾಯಿತು.
ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟದಲ್ಲಿ ಪದಕ ತಂದುಕೊಟ್ಟ ಪತ್ರಕರ್ತರಾದ ಅನಿಲ್ ಕೈರಂಗಳ, ಮುಹಮ್ಮದ್ ಶರೀಫ್, ಸುರೇಶ್ ಎರ್ಮಾಳು, ಉದಯ ಕುಮಾರ್ ಮುಂಡ್ಕೂರು, ಚೇತನ್ ಪೂಜಾರಿ ಮಟಪಾಡಿ ಅವರನ್ನು ಸನ್ಮಾನಿಸಲಾಯಿತು. ತಂಡದ ನೇತೃತ್ವ ವಹಿಸಿದ್ದ ಸಂಘದ ಖಜಾಂಚಿ ಉಮೇಶ ಮಾರ್ಪಳ್ಳಿ ಅವರ ಕೊಡುಗೆಯನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿ ಪಿತ್ರೋಡಿ ಫಿಶ್ ಮೀಲ್ ನಿರ್ದೇಶಕ ಉದಯ್ ಕುಮಾರ್, ಉಡುಪಿ ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಸಂಸ್ಥಾಪಕ ವಿಶ್ವನಾಥ ಶೆಣೈ, ಉಡುಪಿ ಜಿಲ್ಲಾ ಮಾಹಿತಿ ಅಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು.
ಸಮಾರಂಭದ ಅಂಗವಾಗಿ ಸದಸ್ಯ ಜನಾರ್ದನ ಕೊಡವೂರು ಕೊಡುಗೆಯಾಗಿ ನೀಡಿದ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುತ್ತಿರುವ ಸಂಘದ ಭಾವಚಿತ್ರವನ್ನು ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.
ಪ್ರಧಾನ ಕಾರ್ಯದರ್ಶಿ ನಜೀರ್ ಪೋಳ್ಯರವರ ಪ್ರಾಸ್ತಾವಿಕ ಭಾಷಣ ಹಾಗೂ ಸ್ವಾಗತದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬೆಳ್ಳಿಹಬ್ಬ ಸಮಿತಿಯ ಜಂಟಿ ಕಾರ್ಯದರ್ಶಿ ದೀಪಕ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ರಜತ ಮಹೋತ್ಸವ ಸಮಿತಿ ಸಂಚಾಲಕ ಮುಹಮ್ಮದ್ ಶರೀಫ್, ರಾಜ್ಯ ಸಮಿತಿ ಸದಸ್ಯ ಕಿರಣ ಮಂಜನಬೈಲು ಮತ್ತಿತರರು ಭಾಗವಹಿಸಿದ್ದರು.