ಕಡಬ,ನ.30(DaijiworldNews/TA):ಚಾರ್ವಾಕ ಗ್ರಾಮದ ಕುಮಾರಧಾರ ನದಿಯಲ್ಲಿ ನಡೆಯುವ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದು, ಇದೀಗ ಬೋಟ್ ಕಟ್ಟಿ ಹಾಕಿದವರ ವಿರುದ್ದ ಕೇಸು ದಾಖಲಿಸುವ ಬಗ್ಗೆ ಬಂದ ಸುದ್ದಿಯ ಹಿನ್ನೆಲೆ ಶುಕ್ರವಾರ ಸಂಜೆ ಕಡಬ ಠಾಣೆಗೆ ಗ್ರಾಮಸ್ಥರು ಆಗಮಿಸಿದ ಘಟನೆ ನಡೆದಿದೆ.
ಚಾರ್ವಾಕ ಕುಂಬ್ಲಾಡಿ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖರು ಊರವರು ಸೇರಿ ಚಾರ್ವಾಕ ಗ್ರಾಮದ ಭಾಗದಲ್ಲಿ ಮರಳುಗಾರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದಲ್ಲದೆ, ನಿರ್ಣಯವನ್ನೂ ಮಾಡಿದ್ದರು. ಎರಡು ದಿನದ ಹಿಂದೆ ಚಾರ್ವಾಕ ಭಾಗದಲ್ಲಿ ಮರಳುಗಾರಿಕೆಗೆ ಬಂದ ತಂಡಕ್ಕೆ ಊರವರ ಪ್ರತಿರೋಧ ವ್ಯಕ್ತಪಡಿಸಿದಾಗ ಪರಾರಿಯಾಗಿತ್ತು. ನ.29ರಂದು ಮತ್ತೆ ಬೋಟ್ ಮೂಲಕ ತಂಡ ಬಂದಾಗ ಬೋಟನ್ನು ಹಿಡಿದು ಚಾರ್ವಾಕ ಭಾಗದಲ್ಲಿ ಕಟ್ಟಿ ಹಾಕಲಾಗಿತ್ತು. ಬೋಟ್ ನಲ್ಲಿದ್ದ ಮರಳು ಕಾರ್ಮಿಕರು ಪರಾರಿಯಾಗಿದ್ದರು.
ಆದರೆ ಬೋಟ್ ಕಟ್ಟಿ ಹಾಕಿದವರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಳುಗಾರಿಕೆಯಿಂದ ದೈವಸಾನಿಧ್ಯ ನಾಶ ಮತ್ತು ಪ್ರಕೃತಿ ನಾಶವಾದ ಕಾರಣ ಊರವರು ಮರಳುಗಾರಿಕೆಗೆ ವಿರೋಧ ವ್ಯಕ್ತಪಡಿಸಿ ಸಂಬಂಧಪಟ್ಟ ಕಾಣಿಯೂರು ಗ್ರಾ.ಪಂಚಾಯತಿಗೂ ಮನವಿ ಸಲ್ಲಿಸಿ ಇಲಾಖೆಗಳಿಗೆಲ್ಲ ಮರಳುಗಾರಿಕೆ ನಡೆಸದಂತೆ ಪತ್ರ ಬರೆದಿದ್ದರು. ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಕಡಬದ ತಹಶೀಲ್ದಾರ್ ಆಗಲಿ,ಕಂದಾಯ ನಿರೀಕ್ಷಕರೀಗಲೀ,ಕಡಬದ ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.