ಮಣಿಪಾಲ, ನ.30(DaijiworldNews/AA): ಜಾನುವಾರುಗಳಿಗೆ ಮೇವು ತರಲೆಂದು ಮನೆಯ ಪಕ್ಕದ ಗುಡ್ಡಕ್ಕೆ ತೆರಳಿದ್ದ ಮಹಿಳೆಯೊಬ್ಬರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ನ.29ರಂದು ಪತ್ತೆಯಾಗಿದೆ.
ಸರಳೇಬೆಟ್ಟು ವಾರ್ಡ್ನ ನೆಹರೂ ನಗರದ ನಿವಾಸಿ ಪುಷ್ಪಾ ನಾಯ್ಕ್ (66) ಮೃತ ದುರ್ದೈವಿ.
ಪುಷ್ಪಾ ಅವರು ದನಕರುಗಳಿಗೆ ಹುಲ್ಲು ತರಲೆಂದು ಮನೆಯ ಪಕ್ಕದ ಗುಡ್ಡದ ಕಡೆಗೆ ನ. 28ರಂದು ಸುಮಾರು ಸಂಜೆ ೬ ಗಂಟೆ ವೇಳೆಗೆ ತೆರಳಿದವರು, ಬಳಿಕ ವಾಪಸ್ ಮನೆಗೆ ಹಿಂದಿರುಗಿರಲಿಲ್ಲ. ಆತಂಕಗೊಂಡ ಮನೆಯವರು ಅವರಿಗಾಗಿ ಹುಡುಕಾಟ ನಡೆಸಿದ್ದು, ರಾತ್ರಿಯಾದರೂ ಪುಷ್ಪಾ ಅವರ ಬಗ್ಗೆ ಸುಳಿವು ಸಿಗಲಿಲ್ಲ. ಮರುದಿನ ಮುಂಜಾನೆ ಪುಷ್ಪ ಅವರ ಮೃತದೇಹ ಮನೆಯಿಂದ 200 ಮೀ. ದೂರದ ಗುಡ್ಡೆಯಲ್ಲಿ ಪತ್ತೆಯಾಗಿದೆ.
ಪತ್ತೆಯಾದ ಪುಷ್ಪ ಅವರ ಮೃತದೇಹದ ಕುತ್ತಿಗೆಯ ಭಾಗದಲ್ಲಿ ಸಾಮಾನ್ಯ ಗಾಯಗಳಾಗಿರುವುದು ಕಂಡು ಬಂದಿದೆ. ಕೈ ಮೇಲೆ ಗಾಯ ಗಳಾಗಿದ್ದವು. ಅವರ ಕುತ್ತಿಗೆ ಭಾಗವನ್ನು ಇರುವೆ ಮುತ್ತಿಂಡಿತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕವಷ್ಟೆ ಸಾವಿನ ಬಗ್ಗೆ ಸ್ಪಷ್ಟ ಕಾರಣ ತಿಳಿದುಬರಲಿದೆ.
ಮಹಿಳೆಯ ಮೃತದೇಹ ಕಂಡು ಬಂದ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿ ಇದ್ದು. ಆರಂಭದಲ್ಲಿ ಚಿರತೆ ಅಥವಾ ಯಾವುದಾದರೂ ಕಾಡು ಪ್ರಾಣಿ ಪುಷ್ಪ ಅವರ ಮೇಲೆ ದಾಳಿ ನಡೆಸಿರಬಹುದೆಂದು ಎನ್ನುವ ಶಂಕೆ ವ್ಯಕ್ತವಾಗಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.
ಈ ಬಗ್ಗೆ ಮೃತ ಪುಷ್ಪ ಅವರ ಪುತ್ರ ಗಣೇಶ್ ನಾಯ್ಕ್ ಮಾತನಾಡಿದ್ದು, ತಾಯಿ ಆರೋಗ್ಯದಿಂದಿದ್ದರು. ಮರೆವು ಸಮಸ್ಯೆ ಅವರಿಗಿತ್ತು. ಅದು ಬಿಟ್ಟರೆ ಬೇರೇನೂ ಸಮಸ್ಯೆ ಇರಲಿಲ್ಲ. ಎಂದಿನಂತೆ ಹುಲ್ಲು ತರಲೆಂದು ತೋಟದಂಚಿನ ಗುಡ್ಡಕ್ಕೆ ಗುರುವಾರ ತೆರಳಿದ್ದರು. ಅವರ ಮೃತದೇಹ ಮರುದಿನ ಬೆಳಗ್ಗೆ ಪತ್ತೆಯಾಗಿದೆ. ಅವರನ್ನು ಪರೀಕ್ಷಿಸಿದ ವೈದ್ಯರು ಗಾಯವಾದ ಸ್ಥಳದಲ್ಲಿ ಉಗುರಿನಿಂದ ಗಾಯಗೊಂಡ ಬಗ್ಗೆ ಯಾವುದೇ ಗುರುತು ಇಲ್ಲ ಎಂದು ಪ್ರಾಥಮಿಕ ಪರೀಕ್ಷೆಯಲ್ಲಿ ನಮಗೆ ಹೇಳಿದ್ದಾರೆ. ಸಾವಿಗೆ ಕಾರಣ ಏನೆಂದು ನಮಗೆ ಇನ್ನೂ ತಿಳಿದಿಲ್ಲ. ಬಿದ್ದು ಗಾಯಗೊಂಡಿರುವ ಸಾಧ್ಯತೆಯೂ ಇದೆ. ಇದರಿಂದ ಗಾಯಗಳಾಗಿರಬಹುದು ಎಂದು ಹೇಳಿದ್ದಾರೆ.