ಪಾಣೆಮಂಗಳೂರು,ನ.30(DaijiworldNews/TA):ನೂತನ ಸೇತುವೆಯಲ್ಲಿ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು,ಕೆಲ ಹೊತ್ತುಗಳ ಕಾಲ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾದ ಘಟನೆ ನ. 29 ರಂದು ರಾತ್ರಿ ಸುಮಾರು 7 ಗಂಟೆಗೆ ನಡೆದಿದೆ. ಬಿ.ಸಿ.ರೋಡಿನಿಂದ ಮೆಲ್ಕಾರ್ ಕಡೆಗೆ ಸಂಚರಿಸುತ್ತಿದ್ದ ಲಾರಿ ಹಾಗೂ ಪಾಣೆಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಘಟನೆಯಲ್ಲಿ ಕಾರು ಜಖಂಗೊಂಡಿದೆಯಾದರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ. ಆದರೆ ಘಟನೆಯಿಂದ ಸುಮಾರು ಒಂದು ತಾಸಿಗಿಂತಲೂ ಅಧಿಕೃತವಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾರು ಮತ್ತು ಲಾರಿಯನ್ನು ರಸ್ತೆಯಿಂದ ಬದಿಗೆ ಸರಿಸಿದ ಬಳಿಕ ಟ್ರಾಫಿಕ್ ಕ್ಲಿಯರ್ ಆಗಿದೆ. ಚತುಷ್ಪತ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಣೆಮಂಗಳೂರು ಸೇತುವೆಯ ಪಕ್ಕ ಹೊಸ ಸೇತುವೆ ಕಾಮಗಾರಿ ಪೂರ್ಣಗೊಂಡು ಇದೀಗ ವಾರಗಳ ಹಿಂದೆಯಷ್ಟೇ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಹಾಗಾಗಿ ಹಳೆಯ ಸೇತುವೆಯನ್ನು ಬಂದ್ ಮಾಡಿ ಅದರ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಆರಂಭಿಸಿದ್ದಾರೆ .
ಕಾಮಗಾರಿಯ ಹಿನ್ನೆಲೆಯಲ್ಲಿ ಹೊಸ ಸೇತುವೆ ಮೂಲಕ ದ್ವಿಮುಖ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಿನ್ನೆ ರಾತ್ರಿ ಕಾರು ಮತ್ತು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಸೇತುವೆಯ ಅಧಿಕೃತವಾಗಿ ಉದ್ಘಾಟನೆ ಯಾಗದಿದ್ದರೂ ಜನರ ಉಪಯೋಗದ ದೃಷ್ಟಿಯಿಂದ ಕಂಪೆನಿಯವರು ಸೇತುವೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಸಂಚಾರ ಆರಂಭವಾಗಿ ವಾರ ಕಳೆದ ಕೂಡಲೇ ಪ್ರಥಮವಾಗಿ ಇಂದು ಅಪಘಾತ ಸಂಭವಿಸಿದೆ.