ನಂತೂರು,ಡಿ.01 (DaijiworldNews/TA): ಸದ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಈ ವೇಳೆ ಪದುವಾ ಸಮೀಪ ಇರುವ ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಾತೃ, ಮೊದಲ ಸಂಸದ ಉಳ್ಳಾಲ ಶ್ರೀನಿವಾಸ ಮಲ್ಯರ ಪ್ರತಿಮೆ ತೆರವುಗೊಳಿಸಲು ಎನ್ಎಚ್ಎಐ ಅಧಿಕಾರಿಗಳು ಮುಂದಾಗಿದ್ದು, ಅದನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ , ಉಳ್ಳಾಲ ಶ್ರೀನಿವಾಸ್ ಮಲ್ಯ ಅವರು ಜಿಲ್ಲೆಯ ಮೊದಲ ಸಂಸದರಾಗಿ ನವ ಮಂಗಳೂರು ಬಂದರು ಮಂಡಳಿ, ಪಣಂಬೂರು ಮಂಗಳೂರು-ಬೆಂಗಳೂರು ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿ ಜಿಲ್ಲೆಯ ಚಿತ್ರಣವನ್ನೇ ಬದಲಾಯಿಸಿದವರಾಗಿದ್ದಾರೆ. ಅವರ ಪ್ರತಿಮೆಯನ್ನು ಪರ್ಯಾಯ ಜಾಗ ಗುರುತಿಸಿದ ಬಳಿಕವೇ ಸ್ಥಳಾಂತರ ಮಾಡಬೇಕು. ಪ್ರತಿಮೆ ಸ್ಥಳಾಂತರ ಅನಿವಾರ್ಯ ಎಂದು ಎನ್ಎಚ್ಎಐ ಅಧಿಕಾರಿಗಳು ಹೇಳಿದ್ದಾರೆ.
ಆದರೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಹೇಳುತ್ತಿಲ್ಲ ಎಂದರು. ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಅಭಿವೃದ್ಧಿ ಕಾಮಗಾರಿಗೆ ನಮ್ಮ ವಿರೋಧವಿಲ್ಲ. ಆದರೆ ದ.ಕ.ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾಗಿ, ಸಂಸದರಾಗಿ ಇಡೀ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಉಳ್ಳಾಲ ಶ್ರೀನಿವಾಸ್ ಮಲ್ಯ ಶ್ರಮಿಸಿದ್ದಾರೆ. ಪರ್ಯಾಯ ಜಾಗ ಗುರುತಿಸಿ, ಅಲ್ಲಿ ಗೌರವಯುತವಾಗಿ ಪ್ರತಿಮೆ ಮರು ಸ್ಥಾಪಿಸಬೇಕು.
ಮೇಲ್ಸೇತುವೆ ಕಾಮಗಾರಿ ಸಂದರ್ಭದಲ್ಲಿ ಪಂಪ್ವೆಲ್ನ ಮಹಾವೀರ ವೃತ್ತದಲ್ಲಿ ಇದ್ದ ಕಲಶ ತೆರವುಗೊಳಿಸಿ ಅದನ್ನು ಗೌರವಯುತವಾಗಿ ಇರಿಸದೆ ಜೈನ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ಅದೇ ರೀತಿ ಶ್ರೀನಿವಾಸ್ ಮಲ್ಯರ ಪ್ರತಿಮೆಗೆ ಅವಮಾನವಾಗಲು ಕಾಂಗ್ರೆಸ್ ಅವಕಾಶ ನೀಡುವುದಿಲ್ಲ. ತಪ್ಪಿದಲ್ಲಿ ಪ್ರತಿಭಟನೆ ನಡೆಸಲು ಸಿದ್ಧ ಎಂದು ಜೆ.ಆರ್. ಲೋಬೊ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸುಭೋದಯ ಆಳ್ವ, ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ಮಂಜುಳಾ ಕಾಮತ್, ವಿಕಾಸ್ ಶೆಟ್ಟಿ, ಸಮರ್ಥ್ ಭಟ್, ಅಪ್ಪಿ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.