ಮಲ್ಪೆ, ಡಿ.01(DaijiworldNews/AA): ಇಲ್ಲಿನ ಸೈಂಟ್ಮೇರಿಸ್ ಐಲ್ಯಾಂಡಿಗೆ ಬಂದಿದ್ದ ಮಂಡ್ಯ ಮೂಲದ ಶಾಲಾ ವಿದ್ಯಾರ್ಥಿಗೆ ರಕ್ತದೊತ್ತಡ ಕಡಿಮೆಯಾಗಿ ತೀವ್ರ ಅಸ್ವಸ್ಥಗೊಂಡಿದ್ದ. ಈ ವೇಳೆ ವಿದ್ಯಾರ್ಥಿಯನ್ನು ಪ್ರವಾಸಿ ಬೋಟ್ ನಿರ್ವಾಹಕರು ಸ್ಪೀಡ್ಬೋಟ್ ಮೂಲಕ ದಡ ಸೇರಿಸಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಡ್ಯದ ಶಿವಳ್ಳಿಯ ಸರ್ ವಿಶ್ವೇಶ್ವರಯ್ಯ ಪ್ರೌಢಶಾಲೆಯ 10ನೇ ತರಗತಿಯ ಜಗದೀಶ್ವರಿ ಅಸ್ವಸ್ಥಗೊಂಡವರು. ಪ್ರವಾಸಿ ಬೋಟಿನ ನಿರ್ವಾಹಕರಾದ ಪ್ರವೀಣ್ ಮಲ್ಪೆ ಮತ್ತು ಶಾನ್ರಾಜ್ ಕೋಟ್ಯಾನ್ ಅವರು ಆಕೆಯನ್ನು ದಡಕ್ಕೆ ಸಾಗಿಸಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ನೆರವಿಗೆ ಬಂದಿದ್ದಾರೆ.
ಶಾಲಾ ಆಡಳಿತ ಮಂಡಳಿ 3 ದಿನದ ಶೈಕ್ಷಣಿಕ ಪ್ರವಾಸ ಆಯೋಜಿಸಿತ್ತು. ಶನಿವಾರ ಮಲ್ಪೆ ಸೈಂಟ್ಮೇರಿಸ್ ದ್ವೀಪಕ್ಕೆ ಬಂದಿದ್ದ ವಿದ್ಯಾರ್ಥಿಗಳ ಪೈಕಿ ಜಗದೀಶ್ವರಿಗೆ ಬಿಸಿಲಿನ ಝಳಕ್ಕೆ ಒಮ್ಮೆಲೆ ತಲೆತಿರುಗಿ ಬಂದು ವಾಂತಿ ಮಾಡಲು ಪ್ರಾರಂಭಿಸಿದರು. ಬಳಿಕ ರಕ್ತದೊತ್ತಡವೂ ಕಡಿಮೆಯಾಗಿ ಕುಸಿದು ಬಿದ್ದಳು. ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕೂಡಲೇ ಅಲ್ಲೇ ಇದ್ದ ಬೋಟ್ ನಿರ್ವಾಹಕ ಪ್ರವೀಣ್ ಮಲ್ಪೆ ಅವರು ಪ್ರಾಥಮಿಕ ಚಿಕ್ಸಿತೆ ನೀಡಿ ಬಳಿಕ ಶಾನ್ರಾಜ್ ಕೋಟ್ಯಾನ್ ಅವರ ಸಹಕಾರದೊಂದಿಗೆ ಸ್ಪೀಡ್ಬೋಟ್ನಲ್ಲಿ ದಡ ಸೇರಿಸಿ ಆ್ಯಂಬುಲೆನ್ಸ್ ಮೂಲಕ ಉಡುಪಿ ಖಾಸಗಿ ಆಸ್ಪತೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗೆ ಸ್ಪಂದಿಸಿದ ಜಗದೀಶ್ವರಿ ಇದೀಗ ಗುಣಮುಖಳಾಗಿದ್ದಾಳೆ. ಇನ್ನು ಜಗದೀಶ್ವರಿಯ ಚಿಕಿತ್ಸೆಗೆ ಬೇಕಾದ ಎಲ್ಲ ವೆಚ್ಚವನ್ನು ಸೀವಾಕ್ ಬಳಿಯ ಪ್ರವಾಸಿ ಬೋಟಿನವರು ಭರಿಸಿದ್ದಾರೆ.
ಮಲ್ಪೆ ಬೀಚ್, ಸೈಂಟ್ಮೇರಿಸ್ನಲ್ಲಿ ಪ್ರತಿನಿತ್ಯ ಜನಸಂದಣಿ. ಅದರಲ್ಲೂ ಮಲ್ಪೆಗೆ ವಾರಾಂತ್ಯ ಮತ್ತು ರಜಾದಿನದಲ್ಲಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬಹಳಷ್ಟು ಜನ ಇಲ್ಲಿಗೆ ಆಗಮಿಸುತ್ತಾರೆ. ಸಮುದ್ರಕ್ಕಿಳಿದು ಆಟವಾಡುತ್ತಾ ಪ್ರಾಣಕ್ಕೆ ಅಪಾಯ ತಂದುಕೊಳ್ಳುವ ಪ್ರಮೇಯಗಳು ಎದುರಾಗುತ್ತವೆ. ಸೈಂಟ್ಮೇರಿಸ್ ದ್ವೀಪದಲ್ಲಿ ಏನಾದರೂ ಅವಘಡ ಸಂಭವಿಸಿದರೆ ತಕ್ಷಣ ತೀರಕ್ಕೆ ಕರೆದುಕೊಂಡು ಬರಲು ಇಲ್ಲಿ ಯಾವ ವ್ಯವಸ್ಥೆಯೂ ಇಲ್ಲ. ಕನಿಷ್ಠ ಜೆಟ್ಸ್ಕಿ ಸ್ಕೂಟರ್ನ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ ಎಂದು ಪ್ರವಾಸಿ ಬೋಟ್ನ ಮುಖ್ಯಸ್ಥ ಗಣೇಶ್ ಮಲ್ಪೆ ತಿಳಿಸಿದರು.