ಕುಂದಾಪುರ, ಡಿ.01(DaijiworldNews/AA): ಬೆಳ್ವೆ ಸಮೀಪದ ಗುಮ್ಮೋಲ ಎಂಬಲ್ಲಿರುವ ಡ್ಯಾಂಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿಗಳಾದ ಶ್ರೀಶ ಆಚಾರ್ (13) ಹಾಗೂ ಜಯಂತ್ (14) ಎಂದು ಗುರುತಿಸಲಾಗಿದೆ. ಶ್ರೀಶ ಹೆಬ್ರಿಯ ಎಸ್ಆರ್ಎಸ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದುಬಂದಿದೆ.
ಬೆಳ್ವೆ ಸಮೀಪದ ಗೂಮ್ಮೋಲ ಚರ್ಚ್ ಹಿಂಭಾಗದಿಂದ ಕಜ್ಕೆ ಸಂತೆಕಟ್ಟೆ ಸಂಪರ್ಕ ರಸ್ತೆಯ ಬಳಿ ಇರುವ ಕಿಂಡಿ ಅಣೆಕಟ್ಟುವಿನ ಮೇಲ್ಭಾಗದಲ್ಲಿ ಶ್ರೀಶ ಆಚಾರ್, ಜಯಂತ್ ನಾಯ್ಕ್ ಸೇರಿದಂತೆ ನಾಲ್ಕು ಮಕ್ಕಳು ಈಜಲು ತೆರಳಿದ್ದರು ಎನ್ನಲಾಗಿದೆ. ಶ್ರೀಶ ನೀರಿನಲ್ಲಿ ಆಯ ತಪ್ಪುತ್ತಿದ್ದಂತೆ ರಕ್ಷಣೆಗೆ ಜಯಂತ್ ನೀರಿಗೆ ಧುಮುಕಿದ್ದು ಇಬ್ಬರು ನೀರು ಪಾಲಾಗಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದ ಇತರ ಮಕ್ಕಳು ಬೊಬ್ಬೆ ಹೊಡೆದಿದ್ದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ನೀರಿನಲ್ಲಿ ಮುಳುಗಿದ್ದ ಮಕ್ಕಳ ಹುಡುಕಲು ಮುಂದಾದರು. ತಕ್ಷಣ ಶಂಕರನಾರಾಯಣ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಯಿತು. ನೀರಿನಲ್ಲಿ ಮುಳುಗಿದ್ದ ಮಕ್ಕಳನ್ನು ಹುಡುಕಲು ಸ್ಥಳೀಯರು ಪೊಲೀಸರಿಗೆ ಸಹಕರಿಸಿದ್ದು, ಕೆಲವೇ ಹೊತ್ತಿನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.