ಉಳ್ಳಾಲ, ಡಿ.01(DaijiworldNews/AA): ಹೆದ್ದಾರಿಯ ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಂಡವರು, ಮೃತಪಟ್ಟರ ಪರ ನ್ಯಾಯಕ್ಕಾಗಿ ಪ್ರತಿಭಟನೆಗೆ ಮುಂದಾದಾಗ ಆಯುಕ್ತರು ಅನುಮತಿ ನಿರಾಕರಿಸಿದ್ದರು. ಒಂದು ಪ್ರತಿಭಟನೆಗೆ ಅನುಮತಿ ನಿರಾಕರಣೆ ಮಾಡಿದ ಬಳಿಕ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿದೆ. ಆಯುಕ್ತರನ್ನು ನಗರದಿಂದ ಆಚೆ ಕಳಿಸದೆ ನಮ್ಮ ಹೋರಾಟ ನಿಲ್ಲದು, ನಿರಂತರ ಹೋರಾಟ ಮಾಡಿ ಬಂಧನಕ್ಕೊಳಗಾಗುತ್ತೇವೆ. ನೀವು ಹಾಕುವ ಕೇಸುಗಳನ್ನು ಎದುರಿಸುತ್ತೇವೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಎಚ್ಚರಿಕೆ ನೀಡಿದರು.
ಜನಪರ ನೀತಿಗಳನ್ನು ನಿರಾಕರಿಸಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನಿಸುತ್ತಿರುವ ಬ್ರಿಟೀಷ್ ಅಧಿಕಾರಿ ಜನರಲ್ ಡಯರ್ ನಂತೆ ಆದೇಶ ಹೊರಡಿಸುವ ಮಂಗಳೂರು ನಗರ ಪೊಲೀಸ್ ಆಯುಕ್ತ 'ಅನುಪಮ್ ಅಗ್ರವಾಲ್ ಹಠಾವೊ' ಘೋಷಣೆಯಡಿ ಮತ್ತು ಸಿಪಿಐಎಂ ಜಂಟಿ ಆಶ್ರಯದಲ್ಲಿ ಭಾನುವಾರ ಹರೇಕಳದ ಗ್ರಾಮಚಾವಡಿ ಜಂಕ್ಷನ್ ನಲ್ಲಿ ನಡೆದ ರಸ್ತೆ ತಡೆ ಪ್ರತಿಭಟನೆಯಲ್ಲಿ ಮಾತನಾಡಿದರು.
ಯು.ಟಿ.ಖಾದರ್ ಆಯುಕ್ತರ ಪರ ನಿಂತು ವಿದಾನಸಭಾಧ್ಯಕ್ಷ ಸ್ಥಾನದ ಗೌರವ, ಘನತೆಗೆ ಧಕ್ಕೆ ತಂದಿದ್ದಾರೆ. ನಿಮಗೆ ತಾಕತ್ತಿದ್ದರೆ ಬಡವರಿಗೆ ಮನೆ, ಸರ್ಕಾರಿ ಕಾಲೇಜು, ಸರ್ಕಾರಿ ವೈದ್ಯಕೀಯ, ಇಂಜಿನಿಯರ್ ಕಾಲೇಜು ತಂದು ತೋರಿಸಿ ಎಂದು ಅವರು ಸವಾಲು ಹಾಕಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಡವರು ಇಂದು ಐದು, ಹತ್ತು ಸೆಂಟ್ಸ್ ಜಮೀನು ಹೊಂದಿದ್ದರೆ ಅದಕ್ಕೆ ಕಮ್ಯೂನಿಸ್ಟರ್ ಹೋರಾಟ ಕಾರಣ. ಜಿಲ್ಲೆಯ ಹೋರಾಟದ ಪರಿಮಳ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಅವರಿಗೆ ಗೊತ್ತಿಲ್ಲ. ಈಗ ಅಂಥದ್ದೇ ಹೋರಾಟ ಮಾಡಿ ನಿಮ್ಮನ್ನು ಮಂಗಳೂರಿನಿಂದ ಕಳುಹಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
ಡಿವೈಎಫ್ಐ ತಾಲೂಕು ಅಧ್ಯಕ್ಷ ನಿತಿನ್ ಕುತ್ತಾರ್ ಮಾತನಾಡಿ, ರಸ್ತೆ ಗುಂಡಿ ಬಿದ್ದಾಗ ಪ್ರತಿಭಟನೆಯ ಭಯ ಗುತ್ತಿಗೆದಾರನಿಗೆ ಇರುತ್ತದೆ, ಆದರೆ ಪೊಲೀಸ್ ಆಯುಕ್ತರಿಗೆ ಭಯವೇಕೆ? ನಿಮಗೂ, ರಸ್ತೆಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ಸಿಪಿಐಎಂ ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ, ಸಿಪಿಐಎಂ ಮುಖಂಡರಾದ ಕೆ.ಎಚ್.ಹಮೀದ್, ಉಮರಬ್ಬ, ಕಾರ್ಯದರ್ಶಿ ರಿಝ್ವಾನ್ ಹರೇಕಳ, ಮುಖಂಡರಾದ ರಝಾಕ್ ಮೊಂಟೆಪದವು, ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಎಚ್.ಕೆ.ಇಕ್ಬಾಲ್, ಹರೇಕಳ ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಹರೇಕಳ, ಪಿ.ಎಚ್.ಹೈದರ್ ಆಲಡ್ಕ, ರಾಮಚಂದ್ರ ಪಜೀರ್, ಇನ್ನಿತರರು ಉಪಸ್ಥಿತರಿದ್ದರು.