ಕಡಬ, ಡಿ.02(DaijiworldNews/AA): ಕಡಬದ ಬಿಳಿನೆಲೆ ಗ್ರಾಮದ ಮುಂಗ್ಲಿ ಮಜಲು ನಿವಾಸಿ ಸಂದೀಪ್ (29) ಎಂಬವರು ಕಳೆದ ನ.27ರಿಂದ ನಾಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಆದರೆ ಆರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದರೂ ಕಡಬ ಪೊಲೀಸರು ದೂರು ಸ್ವೀಕರಿಸಿರಲಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಜೊತೆಗೆ ದೂರು ನೀಡಲು ಬಂದ ಸಂದೀಪ್ ಅವರ ತಾಯಿಯನ್ನೇ ಬೆದರಿಸಿ ಕಳುಹಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಮುರ್ದಾಳದಲ್ಲಿ ವಿನಯ ಎಂಬವರ ಜೊತೆ ಶಾಮಿಯಾನ ಕೆಲಸ ಮಾಡಿಕೊಂಡಿದ್ದ ಸಂದೀಪ್, ನವೆಂಬರ್ ೨೭ರಿಂದ ನಾಪತ್ತೆಯಾಗಿದ್ದರು. ಅಂದು ಸಂಜೆ ನೆಟ್ಟಣ ನಿವಾಸಿ ಪ್ರತೀಕ್ ಎಂಬಾತನ ಜೊತೆ ಸಂದೀಪ್ ಇದ್ದಿರುವುದಾಗಿ ಶಾಮಿಯಾನ ಮಾಲಕ ವಿನಯ್ ಅವರು ತಿಳಿಸಿದ್ದರು.
ನಾಪತ್ತೆಯಾಗಿ ಮೂರು ದಿನಗಳ ಬಳಿಕ ಕಡಬ ಪೊಲೀಸರು ದೂರು ಸ್ವೀಕರಿಸಿದ್ದು, ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಪ್ರತೀಕ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅದೂ ಅಲ್ಲದೆ ತನಿಖೆಯ ಬಳಿಕ ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಿದ್ದು, ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಪ್ರಕರಣ ಮುಚ್ಚಿಹಾಕಲು ರಾಜಕೀಯ ಒತ್ತಡದ ಗಂಭೀರ ಆರೋಪ ಕೇಳಿಬಂದಿದೆ. ಹಾಗೂ ಸಾವಿನ ಸುತ್ತ ಗಾಂಜಾದ ಅನುಮಾನವನ್ನು ಸಂದೀಪ್ ಕುಟುಂಬಸ್ಧರು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಡಬ ಪೊಲೀಸ್ ಠಾಣೆ ಮುಂದೆ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.