ಮಂಗಳೂರು, ಡಿ.02(DaijiworldNews/AA): ಮದುಮಗಳ ಮನೆಗೆ ಕಾಸರಗೋಡಿನ ಮಂಜೇಶ್ವರದಿಂದ ಬಂದ ಮದುಮಗನ ತಂಡ ಸ್ಥಳೀಯರೊಬ್ಬರಿಗೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಪ್ರತಿಯಾಗಿ ಮದುಮಗನ ತಂಡದಲ್ಲಿದ್ದ ಮಂಜೇಶ್ವರ ಶಾಲಾ ಅಧ್ಯಾಪಕರು ಸೇರಿದಂತೆ ಹಲವರಿಗೆ ಹಲ್ಲೆ ನಡೆಸಿರುವ ಘಟನೆ ಮಂಜನಾಡಿ, ದೇರಳಕಟ್ಟೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.
ಮಂಜೇಶ್ವರ ಗಾಂಧಿನಗರದ ಇರ್ಷಾದ್ ಎಂಬವರ ವಿವಾಹ ಉಳ್ಳಾಲ ಠಾಣಾ ವ್ಯಾಪ್ತಿಯ ಮಂಜನಾಡಿಯ ಯುವತಿ ಜೊತೆಗೆ ನಡೆದಿತ್ತು. ಮದುಮಗಳು ಮಂಜನಾಡಿ ಮೂಲದವರಾಗಿದ್ದು, ಅಲ್ಲಿಗೆ ಭಾನುವಾರ ಸಂಜೆಯ ವೇಳೆ ಕೇರಳದ ಮಂಜೇಶ್ವರದ ಹುಡುಗನ ಕಡೆಯವರು ಅನೇಕ ಕಾರುಗಳಲ್ಲಿ ಆಗಮಿಸಿದ್ದರು. ಈ ವೇಳೆ ಮಾರ್ಗದಲ್ಲಿ ಕಾರುಗಳನ್ನು ನಿಲ್ಲಿಸದಂತೆ ಸ್ಥಳೀಯರೊಬ್ಬರು ತಗಾದೆ ತೆಗೆದಿದ್ದು, ಅದನ್ನೇ ನೆಪವಾಗಿರಿಸಿದ ತಂಡ ಸ್ಥಳೀಯರೊಬ್ಬರಿಗೆ ಹಲ್ಲೆ ನಡೆಸಿದೆ ಎನ್ನಲಾಗಿದೆ.
ಗಾಯಾಳು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ಪ್ರತಿಯಾಗಿ ಮದುಮಗನ ತಂಡ ಮರಳಿ ಮಂಜೇಶ್ವರ ಕಡೆಗೆ ವಾಪಸ್ಸಾಗುವಾಗ ತಂಡವೊಂದು ಅಡ್ಡ ಗಟ್ಟಿ ಕಾರಿನಲ್ಲಿದ್ದ ಮಂಜೇಶ್ವರ ಶಾಲೆಯ ಸರ್ಕಾರಿ ಉದ್ಯೋಗಿ ಅಧ್ಯಾಪಕನ ತಲೆಗೆ ಹಲ್ಲೆ ನಡೆಸಿದೆ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪ್ರಕರಣ ಕೊಣಾಜೆ ಪೊಲೀಸ್ ಠಾಣೆಯ ಮೆಟ್ಟಿಲೇರಿದರೂ ಬಳಿಕ ರಾಜಿಯಲ್ಲಿ ಇತ್ಯರ್ಥಗೊಂಡಿದೆ.