ಬಂಟ್ವಾಳ, ಡಿ.02(DaijiworldNews/AK):ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಡಿ.4 ರಂದು ಮಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಬಂಟ್ವಾಳ ಮಂಡಲದಿಂದ 1500 ಕ್ಕಿಂತ ಮೇಲ್ಪಟ್ಟು ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದು ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ತಿಳಿಸಿದ್ದಾರೆ.
ಬಿಸಿರೋಡಿನ ಪಕ್ಷದ ಕಚೇರಿಯಲ್ಲಿ ಸೋಮವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಂಡಲದ ಎಲ್ಲಾ ಶಕ್ತಿಕೇಂದ್ರದ ವ್ಯಾಪ್ತಿಯಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದ್ದು, ಬಂಟ್ವಾಳ ಮಂಡಲದ ಎಲ್ಲಾ ಮಹಾಶಕ್ತಿ ಕೇಂದ್ರಗಳಲ್ಲಿ ಶಕ್ತಿಕೇಂದ್ರದ ಪ್ರಮುಖರು, ಬೂತ್ ಸಮಿತಿಯ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಸಮಿತಿಯ ಸದಸ್ಯರು, ಮೋರ್ಚಾಗಳ ಪದಾಧಿಕಾರಿಗಳು ಸದಸ್ಯರು ಪ್ರಕೋಷ್ಠದ ಪ್ರಮುಖರು, ಶಾಸಕ ರಾಜೇಶ್ ನ್ಯಾಕ್ ಉಳಿಪ್ಪಾಡಿ ಯವರ ನೇತೃತ್ವದಲ್ಲಿ ಭಾಗವಹಿಸಲಿದ್ದೇವೆ ಎಂದರು.
ಬಾಂಗ್ಲಾದಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ಬಳಿಕ ಸೇನಾ ಬೆಂಬಲ ಹೊಂದಿರುವ ಮಹಮ್ಮದ್ ಯಾನಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಇತ್ತೀಚೆಗೆ ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ಮೇಲೆ ದೌರ್ಜನ್ಯ ಮಿತಿ ಮೀರಿದ್ದು, ಬಾಂಗ್ಲಾ ದೇಶದ ಇಸ್ಕಾನ್ ಸಂತ ಚಿನ್ಮಯ್ ಕೃಷ್ಣದಾಸ ಪ್ರಭು ರವರು, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಹಕ್ಕುಗಳು ಮತ್ತು ಸುರಕ್ಷತೆಗಾಗಿ ಧ್ವನಿಯೆತ್ತುವ ಪ್ರತಿಪಾದಕರಾಗಿ ಗಮನ ಸೆಳೆದಿದ್ದು, ಅವರನ್ನು ಬಂಧಿಸಿರುವುದು ಖಂಡನೀಯ ಎಂದರು.
ಬಾಂಗ್ಲಾದ ಈ ಅಹಿತಕರ ಬೆಳವಣಿಗೆಯ ವಿರುದ್ಧ ಇಡೀ ದೇಶದಲ್ಲಿ ಸಂಘ ಪರಿವಾರ ಸಂಘಟನೆ ಪ್ರತಿಭಟನೆ ನಡೆಸುತ್ತಿದ್ದು, ಹಿಂದೂ ಹಿತರಕ್ಷಣಾ ಸಮಿತಿ ದ.ಕ.ಜಿಲ್ಲೆಯ ವತಿಯಿಂದ ನಡೆಯುವ ಬೃಹತ್ ಪ್ರತಿಭಟನೆ ಪರಿಣಾಮಕಾರಿಯಾಗಿ ಮೂಡಿಬರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ , ದಿನೇಶ್ ಅಮ್ಟೂರು,ಶಿವಪ್ರಸಾದ್ ಶೆಟ್ಟಿ, ಸುದರ್ಶನ್ ಬಜ, ಪುರುಷೋತ್ತಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.