ಬೆಳ್ತಂಗಡಿ, ಡಿ.03(DaijiworldNews/AA): ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಡಿಸೆಂಬರ್ 2ರ ಸಂಜೆ ಸಂಭವಿಸಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯ ಮೃತದೇಹ ನಿನ್ನೆ ರಾತ್ರಿ ಪತ್ತೆಯಾಗಿದೆ.
ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್(38) ಅವರ ಮೃತದೇಹ ಪತ್ತೆ. ಅವರು ಯಾವುದೋ ಕಾರಣಕ್ಕೆ ನದಿಗೆ ಇಳಿದಿದ್ದು, ನಂತರ ಮುಳುಗಿ ಕಾಣೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಗೂ ಮಾಹಿತಿ ನೀಡಲಾಗಿತ್ತು. ಆದರೆ ಮುಳುಗು ತಜ್ಞ ಬೆಳ್ತಂಗಡಿಯ ಸಂಜಯ ನಗರದ ಇಸ್ಮಾಯಿಲ್ ಹಾಗೂ ಅಗ್ನಿಶಾಮಕ ದಳದವರು ಪ್ರಸಾದ್ ಅವರ ಮೃತದೇಹವನ್ನು ಮೆಲಕ್ಕೆತ್ತಿದ್ದಾರೆ.
ಪ್ರಸಾದ್ ಅವರು ಸಂಘದ ಪ್ರಚಾರಕರಾಗಿ ಐದು ವರ್ಷ ಕಾರ್ಯ ನಿರ್ವಹಿಸಿ ಪ್ರಸ್ತುತ ಜಿಲ್ಲಾ ಧರ್ಮಜಾಗರಣಾ ಜಿಲ್ಲಾ ಸಂಯೋಜಯರಾಗಿದ್ದರು. ಪ್ರಸಾದ್ ಅವರ ಅಂತಿಮ ದರ್ಶನಕ್ಕಾಗಿ ಸ್ವಗ್ರಾಮ ಬೆಳಾಲ್ ನಲ್ಲಿ ಇಂದು ಬೆಳಗ್ಗೆ 11ರಿಂದ 1 ಗಂಟೆ ವರೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೃತರು ಪತ್ನಿ, ಒಬ್ಬ ಪುತ್ರನನ್ನು ಅಗಲಿದ್ದಾರೆ.